ಮಗುವಿಗೆ ಜನ್ಮ ನೀಡಲಿರುವ ಪುರುಷ

ಲಂಡನ್ : ಕಳೆದ ಮೂರು ವರ್ಷಗಳಿಂದ ಕಾನೂನುಬದ್ಧವಾಗಿ ಪುರುಷನಂತೆ ವಾಸಿಸುತ್ತಿರುವ ಬ್ರಿಟಿಷ್ ವ್ಯಕ್ತಿಯೊಬ್ಬನಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಸಂಪರ್ಕವೇರ್ಪಟ್ಟ ಅನಾಮಿಕ ವ್ಯಕ್ತಿಯೊಬ್ಬ ವೀರ್ಯಾಣು ದಾನ ಮಾಡಿದ್ದು, ಇದೀಗ ಗರ್ಭ ಧರಿಸಿರುವ ಆತ ಮಗುವಿಗೆ ಜನ್ಮ ನೀಡಿದ ಪ್ರಥಮ ಬ್ರಿಟನ್  ವ್ಯಕ್ತಿಯಾಗುವ ತವಕದಿಂದ ತನ್ನ ಲಿಂಗ ಮಾರ್ಪಾಟು ಪ್ರಕ್ರಿಯೆಯನ್ನು  ಮುಂದೂಡಿದ್ದಾನೆ.

ಹೇಡನ್ ಕ್ರಾಸ್ ಎಂಬ 20ರ ಹರೆಯದ ಈತ ಕಳೆದ ಮೂರು ವರ್ಷಗಳಿಂದ ಪುರುಷನಂತೆ ವಾಸಿಸುತ್ತಿದ್ದು  ಮಹಿಳೆಯಿಂದ ಪುರುಷನಾಗಲು ಲಿಂಗ ಬದಲಾವಣೆ ಪ್ರಕ್ರಿಯೆಯ ಅರ್ಧ ಹಾದಿಯನ್ನು ಹಾರ್ಮೋನು ಚಿಕಿತ್ಸೆ ಮೂಲಕ ಕ್ರಮಿಸಿದ್ದಾನೆ. ಆದರೆ ಅಲ್ಲಿನ ಸರಕಾರಿ ಪ್ರಾಯೋಜಿತ ನ್ಯಾಷನಲ್ ಹೆಲ್ತ್ ಸರ್ವಿಸ್  ಆತನಿಗೆ ಮುಂದೆ ಮಕ್ಕಳಾಗುವಂತೆ ಮಾಡಲು ಸಹಕರಿಸುವ ಸಲುವಾಗಿ ಸುಮಾರು 4000 ಪೌಂಡ್ ವೆಚ್ಚದ ಪ್ರಕ್ರಿಯೆಯ ಮೂಲಕ ಆತನ ಅಂಡಾಣುಗಳನ್ನು ಶೀತಲೀಕರಿಸಲು ನಿರಾಕರಿಸಿದ ನಂತರ ಆತ ಮಗು ಪಡೆಯಲು ನಿರ್ಧರಿಸಿದ್ದ.

ಕ್ರಾಸ್ ಒಬ್ಬ ಮಾಜಿ ಸೂಪರ್ ಮಾರ್ಕೆಟ್ ಉದ್ಯೋಗಿಯಾಗಿದ್ದು ಕೆಲವೇ ತಿಂಗಳುಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾನೆ. “ನನ್ನ ಮಗುವಿಗೆ ಅತ್ಯುತ್ತಮವಾದುದನ್ನೇ ನೀಡಲು ಬಯಸುತ್ತೇನೆ, ಗ್ರೇಟೆಸ್ಟ್ ಡ್ಯಾಡ್ ಆಗ ಬಯಸುತ್ತೇನೆ” ಎಂದಿದ್ದಾನೆ ಕ್ರಾಸ್.