`ಬ್ರಿಟಿಷರು ನೇತಾಜಿಯ ಹಿಂಸಿಸಿ ಕೊಂದಿದ್ದರು’

ನೇತಾಜಿ ಸುಭಾಷ್ ಚಂದ್ರ ಬೋಸ್

ಜಿ ಡಿ ಬಕ್ಷಿಯ ಹೊಸ ಕೃತಿಯಲ್ಲಿ ಉಲ್ಲೇಖ

ಕೊಲ್ಕತ್ತಾ : ನೇತಾಜಿ ಸುಭಾಸಚಂದ್ರ ಬೋಸ್ ಅವರ ಸಾವಿನ ಕುರಿತಾದ ರಹಸ್ಯ ಇನ್ನೂ ರಹಸ್ಯವಾಗಿಯೇ ಉಳಿದಿರುವಾಗಲೇ, “ಅವರು  ವಿಮಾನ ಅಪಘಾತವೊಂದರಲ್ಲಿ ಸಾವನ್ನಪ್ಪಿಲ್ಲ, ಬದಲಾಗಿ ಮಾಜಿ ಸೋವಿಯತ್ ಯೂನಿಯನ್ನಿನ ಒಂದು ಕಾರಾಗೃಹದಲ್ಲಿ ಬ್ರಿಟಿಷರು ವಿಚಾರಣೆಯ ನೆಪದಲ್ಲಿ ನೀಡಿದ ಹಿಂಸೆಯಿಂದ ಸಾವನ್ನಪ್ಪಿದ್ದರು” ಎಂದು ನಿವೃತ್ತ ಮೇಜರ್ ಜನರಲ್ ಜಿ ಡಿ ಬಕ್ಷಿ ತಮ್ಮ `ಬೋಸ್ : ದಿ ಇಂಡಿಯನ್ ಸಮುರೈ- ನೇತಾಜಿ ಎಂಡ್ ದಿ ಮಿಲಿಟರಿ ಅಸೆಸ್ಮೆಂಟ್’ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

“ನೇತಾಜಿ ವಿಮಾನ ಅಪಘಾತದಲ್ಲಿ ಸಾಯಲಿಲ್ಲ. ಅವರನ್ನು ಸೋವಿಯತ್ ಯೂನಿಯನ್ನಿಗೆ ಸುರಕ್ಷಿತವಾಗಿ ಸಾಗಿಸುವ ಉದ್ದೇಶದಿಂದಲೇ ಜಪಾನಿನ  ಏಜನ್ಸಿಗಳು ಇಂತಹ ಒಂದು ಸುದ್ದಿ ಹಬ್ಬಿಸಿದ್ದವು” ಎಂದು ಬಕ್ಷಿ ಅವರ ಕೃತಿಯಲ್ಲಿ ಹೇಳಲಾಗಿದೆ. ನೇತಾಜಿ ಅವರು ಆಗಸ್ಟ್ 18, 1945ರಲ್ಲಿ ತೈಪೇಯಿ ನಗರದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಎಂಬುದಕ್ಕೆ ತಮ್ಮಲ್ಲಿ `ಬಲವಾದ ಸಾಕ್ಷ್ಯಗಳಿವೆ’ ಎಂದೂ ಬಕ್ಷಿ ತಮ್ಮ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.

`ಜಪಾನ್ ದೇಶದಿಂದ ತಪ್ಪಿಸಿ ಬೋಸ್ ಅವರು  ಅಂದಿನ ಸೋವಿಯತ್ ಯೂನಿಯನ್ನಿಗೆ ಹೋಗಿದ್ದರು. ಅಲ್ಲಿ ಅವರು ಸೈಬೀರಿಯಾದಿಂದ  ಮೂರು ರೇಡಿಯೋ ಭಾಷಣ ನೀಡಿದ್ದರು. ಆಗ ಅವರು ಅಲ್ಲಿದ್ದಾರೆಂದು ತಿಳಿದ ಬ್ರಿಟಿಷರು ಸೋವಿಯತ್ ಅಧಿಕಾರಿಗಳನ್ನು ಸಂಪರ್ಕಿಸಿ ತಮಗೆ ಬೋಸ್ ಅವರನ್ನು ವಿಚಾರಣೆ ನಡೆಸಲು ಅನುಮತಿಸುವಂತೆ ಹೇಳಿದರು. ಈ ವಿಚಾರಣೆ ಸಂದರ್ಭವೇ ಅವರಿಗೆ ಹಿಂಸೆ ನೀಡಿ ಕೊಲ್ಲಲಾಯಿತು” ಎಂದು ಬಕ್ಷಿ ಹೇಳಿಕೊಂಡಿದ್ದಾರೆ.