ಮಲ್ಯ ಕುರಿತ ಪುರಾವೆ ಸಲ್ಲಿಸಲು ಭಾರತ ವಿಳಂಬಕ್ಕೆ ಬ್ರಿಟನ್ ಕೋರ್ಟ್ ಆಕ್ಷೇಪ

ಭಾರತದಲ್ಲಿ ಹಣಕಾಸು ವಂಚನೆಯ ಮೊಕದ್ದಮೆ ಎದುರಿಸುತ್ತಿರುವ ಉದ್ಯಮಿ ವಿಜಯ ಮಲ್ಯರನ್ನು ಭಾರತಕ್ಕೆ ರವಾನೆ ಮಾಡುವ ಪ್ರಕ್ರಿಯೆ ಮತ್ತೊಮ್ಮೆ ಡಿಸೆಂಬರಿನವರೆಗೆ ಮುಂದಕ್ಕೆ ಹೋಗಿದೆ. ಭಾರತದಿಂದ ಮಲ್ಯ ಕುರಿತ ಪುರಾವೆ ಸಕಾಲದಲ್ಲಿ ಒದಗಿಬರುತ್ತಿಲ್ಲ ಎಂದು ಆಕ್ಷೇಪಿಸಿರುವ ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊಕದ್ದಮೆಯ ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿದೆ.

ಭಾರತದಿಂದ ಪುರಾವೆ ಒದಗಿಬರಲು ಇನ್ನೂ ಮೂರುನಾಲ್ಕು ವಾರಗಳ ಕಾಲಾವಧಿ ಬೇಕಾಗಬಹುದು ಎಂದು ಭಾರತದ ಪರ ವಕೀಲ ವಾದ ಮಂಡಿಸಿದ ನಂತರ ಕೋರ್ಟ್ ಈ ತೀರ್ಮಾನ ಕೈಗೊಂಡಿದೆ. ಇದೇ ರೀತಿಯ ವಿಳಂಬ ಮುಂದುವರೆದರೆ ಎಪ್ರಿಲ್ 2018ರಲ್ಲೂ ಮೊಕದ್ದಮೆ ಇತ್ಯರ್ಥವಾಗುವುದಿಲ್ಲ ಎಂದು ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದೊಡನೆ ಬ್ರಿಟನ್ ನ್ಯಾಯಾಂಗ ಉತ್ತಮ ಸಂಬಂಧ ಹೊಂದಿದ್ದರೂ ಮಲ್ಯ ಕುರಿತು ಪುರಾವೆ ನೀಡುವಲ್ಲಿ ಸಹಕಾರ ಒದಗಿಬರುತ್ತಿಲ್ಲ ಎಂದು ನ್ಯಾ ವಾಟ್ಕಿನ್ಸ್ ಹೇಳಿದ್ದಾರೆ.

ಭಾರತ ಸರ್ಕಾರದಿಂದ ಸಾಕ್ಷಿ ಪುರಾವೆಗಳನ್ನು ಆಗ್ರಹಿಸಿ ಆರು ವಾರಗಳ ಹಿಂದೆಯೇ ಅರ್ಜಿ ಸಲ್ಲಿಸಲಾಗಿದ್ದರೂ ಭಾರತ ಸರ್ಕಾರ ಒದಗಿಸಲು ವಿಫಲವಾಗಿದೆ ಎಂದು ಮಲ್ಯ ಪರ ವಕೀಲ ಬೆನ್ ವಾಟ್ಸನ್ ಹೇಳಿದ್ದಾರೆ.

ಮಲ್ಯರನ್ನು ಭಾರತಕ್ಕೆ ರವಾನಿಸಲು ಎರಡನೆಯ ಬಾರಿ ಅರ್ಜಿ ಸಲ್ಲಿಸಲಾಗಿದೆ ಎಂಬ ವಾದವನ್ನು ತಳ್ಳಿ ಹಾಕಿರುವ ಕೋರ್ಟ್ ಹಾಗೇನಾದರೂ ಸಲ್ಲಿಸಿದರೆ ಶೀಘ್ರ ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ. ಮಲ್ಯ ಕೋರ್ಟಿಗೆ ಬರುವ ವೇಳೆ ಮಾಧ್ಯಮ ಛಾಯಾಗ್ರಾಹಕರನ್ನು ಅಡ್ಡಿಪಡಿಸಿದ್ದು, ಇನ್ನು ಮುಂದೆ ಸೂಕ್ತ ರಕ್ಷಣೆ ನೀಡುವಂತೆ ಕೋರ್ಟ್ ಆದೇಶಿಸಿದೆ.