`ಪೊಲೀಸ್ ಪಡೆಯಲ್ಲಿ ದಕ್ಷತೆ ದೂರು ಪ್ರಾಧಿಕಾರದ ಉದ್ದೇಶ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪೊಲೀಸ್ ಇಲಾಖೆಯಲ್ಲಿ ದಕ್ಷತೆಯನ್ನು ಕಾದುಕೊಳ್ಳುವುದು ಪೊಲೀಸ್ ದೂರು ಪ್ರಾಧಿಕಾರದ ಮುಖ್ಯ ಉದ್ದೇಶ  ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ಹಾಗೂ ನಿವೃತ್ತ ಹೈಕೋರ್ಟು ನ್ಯಾಯಾಧೀಶ ಎ ಎಸ್ ಪಚಾಪುರೆ ಹೇಳಿದ್ದಾರೆ.

ಅವರು ನಗರದ ಕೋರ್ಟು ಸಭಾಂಗಣದಲ್ಲಿ `ಪೊಲೀಸ್ ದೂರು ಪ್ರಾಧಿಕಾರ’ ಕುರಿತ ಅರಿವು ಕಾರ್ಯಕ್ರಮದಲ್ಲಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬಾರ್ ಎಸೋಸಿಯೇಷನ್ ಮತ್ತು ಪೊಲೀಸ್ ಡಿಪಾರ್ಟ್‍ಮೆಂಟ್ ಜಂಟಿಯಾಗಿ ಆಯೋಜಿಸಿತ್ತು.

“ಹಿರಿಯ ಅಧಿಕಾರಿಯಿಂದ ಹಿಡಿದು ಯಾವುದೇ ಸರ್ಕಾರಿ ಅಧಿಕಾರಿ ತನ್ನ ಕೆಲಸದಲ್ಲಿ ದಕ್ಷತೆಯನ್ನು ತರಬೇಕು. ಒಂದು ವೇಳೆ ಒಬ್ಬ ಪೊಲೀಸ್ ಸಿಬ್ಬಂದಿ ಅನುಚಿತ ವರ್ತನೆ ತೋರಿಸಿದರೆ ಅಂತಹ ಪೊಲೀಸ್ ಸಿಬ್ಬಂದಿ ವಿರುದ್ದ ಜನರು ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದು. ಪ್ರಾಧಿಕಾರದ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ರಾಜ್ಯ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು. ಒಂದು ವೇಳೆ ವರದಿಯಲ್ಲಿ ಆತನ ವರ್ತನೆ ಸಾಬೀತಾದರೆ ಅಂತಹ ಸಿಬ್ಬಂದಿ ಶಿಕ್ಷೆಗೆ ಗುರಿಯಾಗಬಹುದು” ಎಂದು ನ್ಯಾ ಪಚಾಪುರೆ ಹೇಳಿದರು.

“ಒಂದು ವೇಳೆ ಪೊಲೀಸ್ ಸಿಬ್ಬಂದಿಗಳನ್ನು ಪ್ರಶ್ನಿಸಲು ಪ್ರಾಧಿಕಾರವೇ ಇಲ್ಲವಾದರೆ ಪೊಲೀಸ್ ವ್ಯವಸ್ಥೆ ಸ್ವೀಕಾರ್ಹವಾಗುವುದಿಲ್ಲ ಮತ್ತು ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಲು ವಿಫಲವಾಗಬಹುದು” ಎಂದು ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಂಜಯ್ ಸಹಾಯ್ ಈ ಸಂದರ್ಭ ಹೇಳಿದರು.