ಸಚಿವ ಆಂಜನೇಯ ಹಾಡಿ ವಾಸ್ತವ್ಯಕ್ಕೆ ಭರ್ತಿ ಅರ್ಧ ವರ್ಷ : ಸೇತುವೆ ಕಾಮಗಾರಿ ಪೂರ್ಣಗೊಂಡರೂ ಸಂಪರ್ಕವಿಲ್ಲ !

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಜನಪ್ರತಿನಿಧಿಗಳು ಕೆಲಸ ಮಾಡುವುದಕ್ಕಿಂತ ಹೆಚ್ಚು ಪ್ರಚಾರವನ್ನು ಬಯಸುತ್ತಾರೆ ಅನ್ನೋದಕ್ಕೆ ಅತ್ಯುತ್ತಮ ಉದಾಹರಣೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರ ಕಾಲ್ತೋಡು ಗ್ರಾಮದ ಮೂರುರಿನ ಗ್ರಾಮ ವಾಸ್ತವ್ಯ. ಸಚಿವರ ಆಗಮನದ ಬಳಿಕ ತಮ್ಮೆಲ್ಲಾ ಕಷ್ಟಗಳು ಬಗೆಹರಿಯುವುದು ಎಂದುಕೊಂಡಿದ್ದ ಇಲ್ಲಿನ ಜನರ ಸಮಸ್ಯೆ ಸಚಿವರು ಬಂದು ಅರ್ಧ ವರ್ಷ ಕಳೆದರೂ ಇನ್ನೂ ಮುಂದುವರಿದಿದೆ.

2016ರ ಡಿಸೆಂಬರ್ 31ರಂದು ಮುರೂರು ಕುಗ್ರಾಮದಲ್ಲಿ ಸಚಿವ ಆಂಜನೇಯ ಅಬ್ಬರದ ಪ್ರಚಾರದೊಂದಿಗೆ ಗ್ರಾಮ ವಾಸ್ತವ್ಯ ಮಾಡಿದ್ದರು. ಮುರೂರು ಸಂಪರ್ಕ ಸೇತುವೆಯನ್ನು ಕೂಡಲೇ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಹೇಗೋ ಕುಂಟುತ್ತಾ ಸಾಗಿದ್ದ ಸೇತುವೆ ಇದೀಗ ಎದ್ದು ನಿಂತಿದೆ. ಆದರೆ ಸಂಪರ್ಕ ನೀಡುವ ಕೆಲಸವಾಗಿಲ್ಲ. ಭಾರೀ ಮಳೆ ಬಂದು ನೀರು ತುಂಬಿ ಹರಿಯುವ ಮೂರೂರಿನ ಹೊಳೆಯಲ್ಲಿ ಹಾಡಿ ನಿವಾಸಿಗಳು ಸಾಹಸದ ನಡಿಗೆ ಮಾಡುತ್ತಿದ್ದಾರೆ.

ಐಟಿಡಿಪಿ ಇಲಾಖೆಯ ಮೂಲಕ ಕರ್ನಾಟಕ ರೂರಲ್ ಇನಫ್ರಾಸ್ಟ್ರಕ್ಚರ್ ಲಿ ಸಂಸ್ಥೆಯ ಮೂಲಕ ಈ ಕಿರುಸೇತುವೆ ಕಾಮಗಾರಿ 65 ಲಕ್ಷ ರೂಪಾಯಿ ವೆಚ್ಚದಲ್ಲಿ ಸಚಿವರ ಗ್ರಾಮ ವಾಸ್ತವ್ಯಕ್ಕೂ ಮುಂಚೆಯೇ ಹಣ ಬಿಡುಗಡೆಗೊಂಡು ಕೆಲಸ ಆರಂಭಗೊಂಡಿತ್ತು. ಸೇತುವೆಯ ಸ್ಲ್ಯಾಬ್ ಕೆಲಸ, ಗಾರ್ಡುಗಳ ನಿರ್ಮಾಣ ಕಾರ್ಯ ನಡೆದು ಮೂರು ತಿಂಗಳು ಕಳೆದುಹೋಗಿದೆ. ಎರಡು ಕಡೆ ಸಂಪರ್ಕ ಕಲ್ಪಿಸಲು ಇನ್ನೂ 25 ಲಕ್ಷ ರೂಪಾಯಿ ಹೆಚ್ಚುವರಿ ಅನುದಾನದ ಬೇಡಿಕೆಯನ್ನು ಸೇತುವೆ ನಿರ್ಮಾಣ ಸಂಸ್ಥೆ ಇಟ್ಟಿತ್ತು. ಹಣಕಾಸಿನ ಕೊರತೆಯಿಂದ ಈ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಸಚಿವರು ಗ್ರಾಮ ವಾಸ್ತವ್ಯದ ಸಂದರ್ಭ ಇಲ್ಲಿನ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ನೀಡುವುದಾಗಿ ಹೇಳಿದ್ದು, ಅದರಲ್ಲಿ ರೂ 25 ಲಕ್ಷವನ್ನು ಇದಕ್ಕೆ ಇರಿಸಿಕೊಂಡಿದ್ದೇವೆ. ಆ ಬಗ್ಗೆ ಕ್ರಿಯಾ ಯೋಜನೆ ಸಲ್ಲಿಸಿದ್ದೇವೆ. ಈಗಾಗಲೆ ಹಣ ಮಂಜೂರಾಗಿದೆ ಎನ್ನುವ ಮಾಹಿತಿ ಇದೆ. ಒಟ್ಟು 90 ಲಕ್ಷದ ಕಾಮಗಾರಿ ಇದಾಗಿದೆ ಎನ್ನುತ್ತಾರೆ ಉಡುಪಿ ಜಿಲ್ಲಾ ಐಟಿಡಿಪಿ ಅಧಿಕಾರಿ ವಿಶ್ವನಾಥ ಶೆಟ್ಟಿ.