ಕೊಲ್ಲೂರು ದೇವಳ ಸಮಿತಿಗೆ ನೇಮಕ ಹಿಂದೆ 2 ಕೋಟಿ ರೂ ಲಂಚ ಆರೋಪ

????????????????????????????????????

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಆಡಳಿತ ಮಂಡಳಿ ಮಂಗಳವಾರ ಅಸ್ತಿತ್ವಕ್ಕೆ ಬಂದಿದೆ. ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹರೀಶ್‍ಕುಮಾರ ಎಂ ಶೆಟ್ಟಿ ಉಪ್ಪುಂದ, ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್ ಗಾಣಿಗ ಕೊಲ್ಲೂರು, ಅಂಬಿಕಾ ರಾಜೂ ದೇವಾಡಿಗ, ರಾಜೇಶ್ ಕಾರಂತ, ಜಯಂತಿ ವಿಜಯಕೃಷ್ಣ ಪಡುಕೋಣೆ, ನರಸಿಂಹ ಹಳಿಗೇರಿ, ಡಾ ಅಭೀಷೆಕ್ ಪಿಳ್ಳೆ ಹಾಗೂ ದೇವಸ್ಥಾನದ ಪ್ರಧಾನ

ಅರ್ಚಕರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ಈಚೆಗೆ ಆದೇಶ ಹೊರಡಿಸಿದ್ದು, ಮಂಗಳವಾರ ಕೊಲ್ಲೂರಿನ ಜಗದಾಂಬಿಕಾ ಅತಿಥಿ ಗೃಹದಲ್ಲಿ ಕೊಲ್ಲೂರು ದೇಗುಲದ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿರುವ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಜಗನ್ನಾಥ ಅವರ ನೇತ್ರತ್ವದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿಯ ಪ್ರಥಮ ಸಭೆಯಲ್ಲಿ ಕೈ ಎತ್ತುವ ಮೂಲಕ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ನಡೆಸಲಾಯಿತು.

ಆದರೆ ಸೋಮವಾರದವರೆಗೂ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ವಂಡಬಳ್ಳಿ ಜಯರಾಮ ಶೆಟ್ಟಿ ಆಯ್ಕೆಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಮಂಗಳವಾರ ನಡೆದ ಪ್ರಕ್ರಿಯೆಯಲ್ಲಿ ಹರೀಶ್ ಶೆಟ್ಟಿ ಅಧ್ಯಕ್ಷರಾಗುವುದು ಕಂಡ ವಂಡಬಳ್ಳಿ ಜಯರಾಮ ಶೆಟ್ಟಿ ದಂಗಾದರು. ಪರಿಣಾಮವಾಗಿ ಚುನಾವಣಾ ಸಮಯದಲ್ಲಿಯೇ ಜಯರಾಮ ಶೆಟ್ಟಿಯವರು ಶಾಸಕ ಗೋಪಾಲ ಪೂಜಾರಿ ಹಾಗೂ ಅರ್ಚಕ ಮಂಜುನಾಥ ಅಡಿಗರ ವಿರುದ್ಧ ಹರಿಹಾಯ್ದ ಘಟನೆಯೂ ನಡೆಯಿತು.

ಈ ಹಿಂದೆ ಶಾಸಕ ಗೋಪಾಲ ಪೂಜಾರಿ ಅವರು ನೂತನ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ವಂಡಬಳ್ಳಿ ಜಯರಾಮ ಶೆಟ್ಟಿ ಎನ್ನುತ್ತಿದ್ದವರು ಎರಡು ಕೋಟಿ ರೂಪಾಯಿ ಪಡೆದು ರಾತ್ರೋ ರಾತ್ರಿ ನಡೆದ ಬೆಳವಣಿಗೆಯಲ್ಲಿ ಹರೀಶ್ ಶೆಟ್ಟಿಯವರನ್ನು ಆಯ್ಕೆ ಮಾಡುವ ತಂತ್ರಗಾರಿಕೆ ನಡೆಸಲಾಗಿದೆ ಎಂದು ಆರೋಪಿಸಿದರು.

ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿರುವ ಮಂಜುನಾಥ ಅಡಿಗ ಅವರ ವಿರುದ್ಧ ಹರಿಹಾಯ್ದ ವಂಡಬಳ್ಳಿ, ನಿಯಮದಂತೆ ಪ್ರಭಾಕರ ಅಡಿಗ ಪ್ರಧಾನ ಅರ್ಚಕರಾಗಬೇಕಿತ್ತು. ಆದರೆ ಮೂವತ್ತು ಲಕ್ಷ ರೂಪಾಯಿ ನೀಡಿ ಅವರ ಅಧಿಕಾರವನ್ನು ಖರೀದಿ ಮಾಡಲಾಗಿದೆ ಎಂದು ಆರೋಪಿಸಿದ ಘಟನೆಯೂ ನಡೆಯಿತು. ಲಂಚ ಸ್ವೀಕಾರ ಆರೋಪದ ಬಗ್ಗೆ ಶಾಸಕ ಗೋಪಾಲ ಪೂಜಾರಿ ದೂರವಾಣಿಯಲ್ಲಿ ಪ್ರತಿಕ್ರಿಯಿಸಿ, “ಕಾನೂನು ಬದ್ಧವಾಗಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಲೋಕಾಯುಕ್ತ ಪ್ರಕರಣ ತನಿಖಯಲ್ಲಿದ್ದ ಕಾರಣ ವಂಡಬಳ್ಳಿಯವರನ್ನು ಆಯ್ಕೆ ಮಾಡುವಲ್ಲಿ ಒಪ್ಪಿಗೆ ಸೂಚಿಸಿಲ್ಲ ಹೊರತು ಮತ್ತಾವುದೇ ಕಾರಣ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.