ಮೆದುಳು ನಿಷ್ಕ್ರಿಯ ವ್ಯಕ್ತಿಯಿಂದ ಮತ್ತೊಬ್ಬನಿಗೆ ಜೀವದಾನ

ಬೆಂಗಳೂರು : ಮೆದುಳು ನಿಷ್ಕ್ರಿಯವಾಗಿ ಬಳಲಿ  ಉತ್ತರಹಳ್ಳಿಯಲ್ಲಿರುವ ಬಿಜಿಎಸ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  26 ವರ್ಷದ ರವಿ ಎಂಬಾತನ ಹೃದಯವನ್ನು ಬೆಂಗಳೂರಿನ ಬೊಮ್ಮಸಂದ್ರ ಬಡಾವಣೆಯಲ್ಲಿರುವ ನಾರಾಯಣ ಹೃದಯಾಲಯಕ್ಕೆ ಹಸಿರು ಕಾರಿಡಾರ್ ಮೂಲಕ ತ್ವರಿತಗತಿಯಲ್ಲಿ ಸಾಗಿಸುವುದರಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

ರವಿ ದಾನ ಮಾಡಿದ ಹೃದಯವನ್ನು ಕೇವಲ 26 ನಿಮಿಷಗಳಲ್ಲಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ತಲುಪಿಸಿರುವ ವೈದ್ಯರ ತಂಡ ರವಿಯ ಹೃದಯವನ್ನು ಮತ್ತೊಬ್ಬ ಹೃದ್ರೋಗಿಗೆ ಅಳವಡಿಸುವುದರಲ್ಲೂ ಯಶಸ್ವಿಯಾಗಿದೆ.

ಏಪ್ರಿಲ್ 16ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡ ರವಿಯನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಲ್ಮೆಟ್ ಧರಿಸದೆ ವಾಹನದ ಹಿಂಬದಿ ಸವಾರನಾಗಿ ಹೋಗುತ್ತಿದ್ದ ರವಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು  ಮೆದುಳು ನಿಷ್ಕಿಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ರವಿಯ ಹೃದಯವನ್ನು ಕೊಪ್ಪಳ ಜಿಲ್ಲೆಯ 40 ವರ್ಷ ವಯಸ್ಸಿನ ನಾಗರಾಜ್ ಎಂಬಾತನಿಗೆ ಯಶಸ್ವಿಯಾಗಿ ಅಳವಡಿಸಲಾಗಿದೆ. 2012ರಿಂದಲೂ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಕೃಷಿಕ ನಾಗರಾಜ  ಅಂದಿನಿಂದಲೂ ನಾರಾಯಣ ಹೃದಯಾಲಯದ ಹೃದಯ ವೈಫಲ್ಯ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರವಿಯ ಹೃದಯವನ್ನು ನಾಗರಾಜಗೆ ಕಸಿ ಮಾಡುವ ಪ್ರಕ್ರಿಯೆಯನ್ನು ಟಿಟಿಕೆ ರಕ್ತನಿಧಿಯ ಸಂಸ್ಥೆಯಲ್ಲಿ ನಡೆಸಲಾಗಿದೆ. ಹಿರಿಯ ಹೃದ್ರೋಗ ತಜ್ಞ ಡಾಕ್ಟರ್ ಜೂಲಿಯಸ್ ಪುನ್ನನ್ ಅವರ ನೇತೃತ್ವದಲ್ಲಿ ವೈದ್ಯರ ತಂಡ ಈ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ನಡೆಸಿದೆ.