ನೀಲಿ ಬಣ್ಣಕ್ಕೆ ತಿರುಗುವ ಪಡಿತರ ಉಪ್ಪು : ಆತಂಕದಲ್ಲಿ ಬಿಪಿಎಲ್ ಪಡಿತರದಾರರು

ಅನ್ನಕ್ಕೆ ಉಪ್ಪು ಮಿಶ್ರಣ ಮಾಡಿದಾಗ ಅದು ನೀಲಿ ಬಣ್ಣಕ್ಕೆ ತಿರುಗಿರುವುದು

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ಆಹಾರ ಇಲಾಖೆಯ ವತಿಯಿಂದ ಬಿಪಿಎಲ್ ಪಡಿತರ ಚೀಟಿದಾರರಿಗೆ ಪೂರೈಕೆಯಾಗುತ್ತಿರುವ ಉಪ್ಪು ಕಳಪೆ ಗುಣಮಟ್ಟದಿಂದ ಕೂಡಿದೆ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಈ ಉಪ್ಪನ್ನು ಅಡುಗೆಗೆ ಬಳಸಿದಾಗ ನೀಲಿ ಬಣ್ಣ ಪಡೆದುಕೊಳ್ಳುತ್ತಿದ್ದು, ಇದು ಪಡಿತರದಾರರಲ್ಲಿ ತೀವ್ರ ಆತಂಕ ಮೂಡಿಸಿದೆ.

ಅಜೆಕಾರು ನ್ಯಾಯಬೆಲೆ ಅಂಗಡಿಯಿಂದ ಸ್ಥಳೀಯ ದೆಪ್ಪುತ್ತೆ ನಿವಾಸಿ ಗುಲಾಬಿ ಎಂಬವರು ಅನ್ನಭಾಗ್ಯ ಯೋಜನೆಯ ಉಪ್ಪನ್ನು ಖರೀದಿಸಿ ಬಳಿಕ ಅದನ್ನು ತಾವು ಊಟ ಮಾಡುವಾಗ ಗಂಜಿಗೆ ಬೆರೆಸಿದಾಗ ಕೆಲವೇ ಸೆಕೆಂಡುಗಳಲ್ಲಿ ಉಪ್ಪು ನೀಲಿ ಬಣ್ಣಕ್ಕೆ ತಿರುಗಿದೆ. ಅಲ್ಲದೇ ಈ ಉಪ್ಪು ರಾಸಾಯನಿಕ ವಾಸನೆ ಬೀರುತ್ತಿದ್ದು, ಇದು ಕಲಬೆರಕೆಯಾಗಿರುವ ಸಾಧ್ಯತೆ ದಟ್ಟವಾಗಿದೆ.

ಉಪ್ಪು ಯಾವುದೇ ಕಾರಣಕ್ಕೂ ನೀಲಿ ಬಣ್ಣ ಹೊಂದಲು ಸಾಧ್ಯವಿಲ್ಲ, ಯಾಕೆಂದರೆ ಮಾರುಕಟ್ಟೆಯಲ್ಲಿ ದೊರಕುವ ಉಪ್ಪು ಶುದ್ಧ ಬಿಳಿ ಬಣ್ಣದಿಂದ ಕೂಡಿದ್ದು, ಅಡುಗೆಗೆ ಮಿಶ್ರಣ ಮಾಡಿದ್ದಲ್ಲಿ ತನ್ನ ನೈಜ ಬಿಳಿಬಣ್ಣವನ್ನು ಕಳೆದುಕೊಳ್ಳುವುದಿಲ್ಲ. ಆದರೆ ಸರಕಾರದ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಪಡಿತರ ವಿತರಿಸುವ ಗುತ್ತಿಗೆ ಪಡೆದಿರುವ ಪೂರೈಕೆದಾರರು ಇಂತಹ ಕಳಪೆ ಸಾಮಗ್ರಿಗಳನ್ನು ಪೂರೈಸುವುದರಿಂದ ಬಡವರ ಆರೋಗ್ಯದ ಸ್ಥಿತಿ ಹದಗೆಡುತ್ತದೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಈ ಕುರಿತು ಆಹಾರ ಇಲಾಖೆಯವರು ಕೂಡಲೇ ಎಚ್ಚೆತ್ತು ಆರೋಗ್ಯಕ್ಕೆ ಮಾರಕವಾಗಬಲ್ಲ ಪಡಿತರ ಸಾಮಗ್ರಿಗಳನ್ನು ಪೂರೈಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.