ಅಂಗ ದಾನದ ಮೂಲಕ ನಾಲ್ವರಿಗೆ ಬೆಳಕಾದ ಬಾಲಕ

ಬೆಂಗಳೂರು : ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ ಬಾಲಕನೊಬ್ಬ ಅಂಗಾಂಗ ದಾನ ಮಾಡುವ ಮೂಲಕ ನಾಲ್ವರ ಬಾಳಿಗೆ ಬೆಳಕಾಗಿದ್ದಾನೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನ ತಾಯಿ ತನ್ನ ಪುತ್ರನ ಅಂಗಾಂಗ ದಾನ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಇದೀಗ ನಾಲ್ವರಿಗೆ ಅಂಗಾಂಗ ದಾನ ಮಾಡಲಾಗಿದೆ. ಜ 12ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ 19ರಂದು ವಿಧಿವಶನಾಗಿದ್ದ.

ತಲೆಗೆ ಏಟು ಬಿದ್ದು, ಮೆದುಳು ಸಂಪೂರ್ಣ ನಿರ್ಜೀವಗೊಂಡಿದ್ದ ಬಾಲಕನ ಹೃದಯ, ಲಿವರ್, ಕಿಡ್ನಿ ಮತ್ತು ಕಣ್ಣುಗಳನ್ನು ದಾನ ಮಾಡಲಾಗಿದೆ. ಕಳೆದ ಐದು ವರ್ಷಗಳಿಂದ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ 44ರ ಹರೆಯದ ರೋಗಿಯೊಬ್ಬರಿಗೆ ಈತನ ಒಂದು ಕಿಡ್ನಿಯನ್ನು ನೀಡಲಾಗಿದೆ. ಜ 20ರಂದು ಮಧ್ಯಾಹ್ನ 12ರಿಂದ 3.30ರ ತನಕ ನಡೆದ ಶಸ್ತ್ರ ಚಿಕಿತ್ಸೆ ಮೂಲಕ ಅವರಿಗೆ ಕಿಡ್ನಿಯನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ಮೂತ್ರರೋಗ ತಜ್ಞ, ನಿರ್ದೇಶಕ ಡಾ ಮೋಹನ್ ಕೇಶವ ಮೂರ್ತಿ ಈ ಚಿಕಿತ್ಸೆಯನ್ನು ನಡೆಸಿದ್ದಾರೆ.