ಬಾಯ್ಫ್ರೆಂಡ್ ಇರಿಟೇಟ್ ಮಾಡುತ್ತಿದ್ದಾನೆ

ಪ್ರ : ನಮ್ಮಿಬ್ಬರಿಗೂ ಈಗ 22 ವರ್ಷ. ಡಿಗ್ರಿ ಫೈನಲ್ ಇಯರ್‍ನಲ್ಲಿ ನಮ್ಮ ಪ್ರೀತಿ ಶುರುವಾಯಿತು. ಈ ನಡುವೆ ಅವನ ಗುಣ ನನಗೆ ಇರಿಟೇಟ್ ಆಗುತ್ತಿದೆ. ಅವನಿಗೆ ತಾನು ಗ್ರೇಟ್ ಅನ್ನುವ ಭಾವನೆ. ಉಳಿದವರನ್ನು ಕೀಳಂದಾಜಿಸುವುದು ಅವನ ಹ್ಯಾಬಿಟ್. ನನ್ನ ಬಗ್ಗೆಯೇ ನನಗೀಗ ಆಶ್ಚರ್ಯವಾಗುವುದೆಂದರೆ ಮೊದಲು ನಾನು ಅವನ ಆ ರೀತಿಯ ಗುಣಕ್ಕೇ ಮರುಳಾಗಿದ್ದು. ಅವನ ಆ  ಸ್ವಭಾವವನ್ನು ನಾನು ಅತೀ ಆತ್ಮವಿಶ್ವಾಸ ಅಂದು ಭಾವಿಸಿದ್ದೆ. ಆದರೆ ಈಗೀಗ ಅವನು ಪರೋಕ್ಷವಾಗಿ ನನ್ನನ್ನೂ ಕೆಳಮಟ್ಟದಲ್ಲಿ ನೋಡುತ್ತಿದ್ದಾನೆ ಅನಿಸಿ ನನ್ನ ಮೂಡೆಲ್ಲ ಕೆಡುತ್ತಿದೆ. ಉದಾಹರಣೆಗೆ ನನಗೆ ಹಿಂದಿ ಧಾರವಾಹಿ ಇಷ್ಟ. ಹಿಂದಿಯ ಹಾಡುಗಳೂ ನನಗೆ ಖುಶಿ ಕೊಡುತ್ತದೆ. ಅವನು ಕೇಳುವುದು ಪಾಪ್ ಸಾಂಗ್ಸ್‍ಗಳನ್ನು, ಜಾಸ್ತಿ ನೋಡುವುದು ಇಂಗ್ಲೀಷ್ ಸಿನಿಮಾಗಳನ್ನು. ಕಾರಿನಲ್ಲಿ ಅವನ ಜೊತೆ ಹೊಗುವಾಗೆಲ್ಲ ತನಗಿಷ್ಟವಾದ ಮ್ಯೂಸಿಕ್ ಗಟ್ಟಿಯಾಗಿ ಹಾಕಿಕೊಂಡು ಹೋಗುತ್ತಾನೆ. ನಾನು ನೋಡುವುದು ಕೇಳುವುದೆಲ್ಲವೂ ಕಳಪೆಯಾಗಿ ಅವನಿಗೆ ಕಾಣುತ್ತಿವೆ.  ಆಗ ನನಗೆ ಪ್ರೀತಿಯ ಮಾತಾಡಬೇಕು ಅಂತಲೇ ಅನಿಸುವುದಿಲ್ಲ. ನನ್ನ ಟೇಸ್ಟ್‍ಗಳನ್ನು ತಮಾಷೆ ಮಾಡುತ್ತಾನೆ. ಅವನು ಎಲ್ಲರಂತೆ ಸಾದಾಸೀದಾ ಇರಬಾರದಿತ್ತೇ ಅಂತ ಅನಿಸುತ್ತಿದೆ. ನಾನು ಅವನ ಜೊತೆಗಿನ ಸಂಬಂಧವನ್ನು ಬ್ರೇಕಪ್ ಮಾಡಿಕೊಳ್ಳುವುದು ಒಳ್ಳೆಯದಾ?

: ನೀವು ಬಹುಬೇಗ ಕಿರಿಕಿರಿಯಾಗುವ ಹುಡುಗಿಯಾಗಿ ಕಾಣುತ್ತೀರಿ. ಅವನು ಸಾದಾಸೀದಾ ಇರಬೇಕು ಅಂದರೆ ಅದು ಹೇಗೆ? ಅದು ಅವನ ಹುಟ್ಟಾ ಗುಣ. ಅವನ ಆ ಗುಣಕ್ಕೇ ಮನಸೋತ ನೀವು ಈಗ ಅವನನ್ನು ಬದಲಾಯಿಸಲು ನೋಡುತ್ತಿದ್ದೀರಿ. ನಿಮ್ಮನ್ನು ಅವನು ಹೇಗೆ ನೀವಿದ್ದಿರೋ ಹಾಗೇ ಪ್ರೀತಿಸಿದನೋ ಹಾಗೇ ಅವನನ್ನು ನೀವು ಒಪ್ಪಿಕೊಂಡರೆ ಸಮಸ್ಯೆಯೇ ಇರುವುದಿಲ್ಲ. ಮೊದಲು ನೀವು ಅವನ ಜೊತೆ ಕುಳಿತು ಮಾತಾಡಿ. ಅವನ ಕೆಲವು ಮಾತುಗಳು ನಿಮಗಿಷ್ಟವಾಗುತ್ತಿಲ್ಲವಾದರೆ ಅದನ್ನು ನೇರವಾಗಿಯೇ ಹೇಳಿ. ಅವನೂ ಕೊಂಚ ಬದಲಾಗಬಹುದು. ಇಬ್ಬರ ಅಭಿರುಚಿಗಳು ಬೇರೆಬೇರೆಯಾದರೂ ಒಬ್ಬರು ಇನ್ನೊಬ್ಬರ ಇಷ್ಟಗಳನ್ನು ಗೌರವಿಸಿದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಮೊದಲು ನೀವು ಕೆಲವು ವಿಷಯಗಳನ್ನು ಸಹಿಸಿಕೊಳ್ಳುವುದನ್ನು ಕಲಿಯಿರಿ. ಅವನಿಗೂ ನಿಮ್ಮ ಹವ್ಯಾಸಗಳಿಗೆ ಬೆಲೆ ಕೊಡಲು ಹೇಳಿ. ನಿಮ್ಮ ಎರಡು ವರ್ಷದ ಒಡನಾಟವನ್ನು ಸಣ್ಣ ವಿಷಯಕ್ಕೆ ಬ್ರೇಕಪ್ ಮಾಡಿಕೊಳ್ಳುವುದಕ್ಕಿಂತ ನಿಮ್ಮ ನಡುವಿನ ವ್ಯತ್ಯಾಸವನ್ನು ಬಗೆಹರಿಸಿಕೊಳ್ಳಲು ಸಾಧ್ಯವಾ ಅಂತ ನೋಡಿ. ಯಾಕೆಂದರೆ  ಸಂಬಂಧದಲ್ಲಿ ನೂರಕ್ಕೆ ನೂರು ಒಂದೇ ಅಭಿರುಚಿ ಉಳ್ಳವರು ಸಿಗುವುದು ಕಷ್ಟ. ಆದರೆ ಪ್ರತೀ ಸಲವೂ ಅವನ ಇಷ್ಟವನ್ನೇ ನಿಮ್ಮ ಮೇಲೆ ಹೇರುತ್ತಿದ್ದರೆ ಕಷ್ಟವೇ.

1 COMMENT

Comments are closed.