ಹಗ್ಗದಿಂದ ಕಟ್ಟಿದ 7 ವರ್ಷದ ಬಾಲಕನನ್ನು 200 ಮೀ ದೂರ ಎಳೆದುಕೊಂಡು ಹೋದ ಎಮ್ಮೆ

ಸಿಲಿಗುರಿ : ಸಮಾಜವಿರೋಧಿ ವ್ಯಕ್ತಿಯೊಬ್ಬ ಏಳು ವರ್ಷದ ಬಾಲಕನೊಬ್ಬನ ಮೇಲೆ ಕ್ರೂರ ಅಟ್ಟಹಾಸಗೈದು ಆತನ ಕೈಯ್ಯನ್ನು ಹಗ್ಗದಿಂದ ಬಿಗಿದು ಅದನ್ನು ಎಮ್ಮೆಯೊಂದರ ಮೂಗುದಾರಕ್ಕೆ ಕಟ್ಟಿ ಎಮ್ಮೆಗೆ ಎರಡೇಟು ಹೊಡೆದು ಓಡಿಸಿದ ಪರಿಣಾಮ ಅದು ಬಾಲಕನನ್ನು ಸುಮಾರು 200 ಮೀಟರ್ ದೂರದ ತನಕ ರಸ್ತೆ, ತೋಡು, ಕಲ್ಲು ಬಂಡೆಗಳೆಡೆಯಲ್ಲಿ ಎಳೆದುಕೊಂಡು ಹೋಗಿ ಆತನನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಸಿಲಿಗುರಿಯ ಪಬಿತ್ರಾ ನಗರ್ ಕಾಲೊನಿಯಿಂದ ವರದಿಯಾಗಿದೆ.

ಆರೋಪಿಯನ್ನು ರಬಿ ರಾಯ್ ಆಲಿಯಾಸ್ ರಬಿಯಾ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಬಾಲಕ ನಾರಾಯಣ್ ದೇ ಸರ್ಕಾರ್ ಎಂಬವನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಬಲಗೈ ಮುರಿದಿದೆ ಹಾಗೂ ಆತನ ಸೊಂಟಕ್ಕೂ ಪೆಟ್ಟಾಗಿದೆ. ಆತನ ತಲೆ ಟೆಲಿಫೋನ್ ಕಂಬವೊಂದಕ್ಕೆ ಗುದ್ದಿದ ಕಾರಣ ಆತ ತೀವ್ರವಾಗಿ ಗಾಯಗೊಂಡನೆಂದು ಹೇಳಲಾಗಿದೆ.

ಈ ಘಟನೆಗೆ ಮೂಕ ಸಾಕ್ಷಿಯಾದ ಗ್ರಾಮಸ್ಥರು ತಾವೇನು ಮಾಡುವಂತಿರಲಿಲ್ಲವೆಂದು ಹೇಳಿಕೊಂಡಿದ್ದಾರೆ. ಬಾಲಕನನ್ನು ಕಟ್ಟಿದ್ದ ಹಗ್ಗ ತುಂಡಾಗಿ ಹೋಗಿದ್ದರಿಂದ ಆತ ಬದುಕುಳಿದನೆಂದು ಇನ್ನೊಬ್ಬ ಗ್ರಾಮಸ್ಥ ಹೇಳಿದ್ದಾನೆ.

ಪೊಲೀಸರು ಆರೋಪಿಯ ವಿರುದ್ಧ ಜಾಮೀನುರಹಿತ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿದ್ದರೂ ಆತನನ್ನು ಇನ್ನೂ ಬಂಧಿಸಲಾಗಿಲ್ಲ.