ಹಾವು ಕಡಿದ ಬಾಲಕಿ ರಕ್ಷಿಸಿದ ಸಹೋದರ

ಸಾಂದರ್ಭಿಕ ಚಿತ್ರ

 ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಸಹೋದರಿಗೆ ವಿಷಯುಕ್ತ ಹಾವು ಕಡಿದಾಗ ತಾನು ಶಾಲೆಯಲ್ಲಿ ಕಲಿತ ಪ್ರಥಮ ಚಿಕಿತ್ಸಾ ವಿಧಾನವನ್ನು ಪ್ರಯೋಗಿಸಿ ಸಹೋದರಿಯ ರಕ್ತದಲ್ಲಿದ್ದ ವಿಷವನ್ನು ತನ್ನ ಬಾಯಲ್ಲಿ ಹೀರಿ ಸಹೋದರಿಯನ್ನು ರಕ್ಷಿಸಿದ ಘಟನೆ ಕೊಕ್ಕಡದಲ್ಲಿ ಕನ್ನಹಿತ್ತಿಲು ಎಂಬಲ್ಲಿ ನಡೆದಿದೆ.

ಕನ್ನಹಿತ್ತಿಲು ಮನೆ ನಿವಾಸಿ ರಾಜು ಎಂಬವರ ಮಗನಾದ ನಿತಿನ್ ಕೆ ಆರ್ ಧೈರ್ಯದಿಂದ ಪ್ರಥಮ ಚಿಕಿತ್ಸೆ ನೀಡಿ ಸಹೋದರಿಯನ್ನು ರಕ್ಷಿಸಿದ ಬಾಲಕ. ಈತ ನೆಲ್ಯಾಡಿಯ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ. ತನ್ನ ಮನೆಯ ತೋಟದಲ್ಲಿ ತನ್ನ ತಂಗಿ 11ರ ಹರೆಯದ ಶರಣ್ಯಾಳಿಗೆ ವಿಷ ಪೂರಿತ ಹಾವು ಕಡಿದಿತ್ತು. ಇದನ್ನು ಕಂಡ ನಿತಿನ್ ತಾನು ಶಾಲೆಯಲ್ಲಿ ಕಲಿತಿದ್ದ ಪ್ರಥಮ ಚಿಕಿತ್ಸಾ ವಿಧಾನವನ್ನು ಇಲ್ಲಿ ಪ್ರಯೋಗಿಸಿದ. ಹಾವು ಕಡಿದ ಭಾಗದ ಮೇಲ್ಭಾಗವನ್ನು ಬಟ್ಟೆಯಲ್ಲಿ ಬಲವಾಗಿ ಕಟ್ಟಿ ಆಕೆಯ ಹಾವು ಕಡಿದ ಭಾಗದಲ್ಲಿ ರಕ್ತವನ್ನು ತನ್ನ ಬಾಯಲ್ಲಿ ಬಲವಾಗಿ ಹೀರಿ ವಿಷ ಪೂರಿತ ರಕ್ತ ದೇಹದ ವಿವಿಧೆಡೆಗಳಿಗೆ ಪ್ರಸಹರಿಸದಂತೆ ಮುನ್ನೆಚ್ಚರಿಕೆ ವಹಿಸಿದನು. ಹಾವು ಕಡಿದಾಕ್ಷಣ ನಡೆಸಿದ ಈ ತ್ವರಿತ ಕ್ರಮದಿಂದಾಗಿ ಶರಣ್ಯಾ ಚೇತರಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ಹೆಚ್ಚಿನ ಚಿಕಿತ್ಸೆಗೆ ಒಳಗಾದಳು.