ಸಮುದ್ರಕ್ಕಿಳಿದ ಬಾಲಕ ಮೃತ

ನಮ್ಮ ಪ್ರತಿನಿಧಿ ವರದಿ
ಪಡುಬಿದ್ರಿ : ಸಂಜೆ ಶಾಲೆಬಿಟ್ಟು ಮನೆಗೆ ಹೋಗುವ ಮುನ್ನ ನಿತ್ಯದಂತೆ ಮೂಳೂರು ತೊಟ್ಟಂ ಬಳಿ ನೀರಾಟಕ್ಕೆ ಸಮುದ್ರಕ್ಕಿಳಿದ ಬಾಲಕರ ತಂಡದ ಒಬ್ಬ ಸದಸ್ಯ ಕಡಲ ಅಬ್ಬರಕ್ಕೆ ಕೊಚ್ಚಿ ಹೋಗಿ ಸಮುದ್ರ ಪಾಲಾದ ಘಟನೆ ಬುಧವಾರ ಸಂಜೆ ನಡೆದಿದೆ.
ಸ್ಥಳೀಯ ಮಹಾಲಕ್ಷ್ಮೀ ನಗರದ ನಿವಾಸಿ ಶೇಖರ್ ಪೂಜಾರಿಯ ಮಗ ರಾಕೇಶ್ ಪೂಜಾರಿ (12) ಮೃತ ಬಾಲಕ. ಈತ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದು, ಸಂಜೆ ಶಾಲೆ ಬಿಟ್ಟ ಬಳಿಕ ತನ್ನ ಶಾಲಾ ಸಹಪಾಠಿಗಳೊಂದಿಗೆ ಮೂಳೂರಿನ ತೊಟ್ಟಂ ಬಳಿ ತೀರದಲ್ಲಿ ಸೈಕಲ್ ಸಹಿತ ಶಾಲಾ ಬ್ಯಾಗ್ ಬಟ್ಟೆಗಳನ್ನು ಇರಿಸಿ ನೀರಾಟದಲ್ಲಿ ತೊಡಗಿದ್ದರು.
ಕೆಲವು ದಿನಗಳಿಂದ ಕಡಲಿನ ಅಬ್ಬರ ಅತಿಯಾಗಿದ್ದು, ಬಾಲಕನನ್ನು ಬೃಹತ್ ಅಲೆಯೊಂದು ತನ್ನೊಡಲಿಗೆ ಸೆಳೆದುಕೊಂಡಿದೆ. ಅದನ್ನು ಕಂಡ ಉಳಿದ ಬಾಲಕರು ಹೆದರಿ ಸ್ಥಳದಿಂದ ಪರಾರಿಯಾಗಿದ್ದರು. ಅದೇ ವೇಳೆ ಸ್ಥಳೀಯರೊಬ್ಬರು ಗಮನಿಸಿ ಬಾಲಕನ ಮೇಲೆತ್ತಿದರೂ ಅದಾಗಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು.
ತಂದೆ ಪೈಂಟರ್ ಕೂಲಿ ಕೆಲಸ ಮಾಡುತ್ತಿದ್ದು, ಇಬ್ಬರು ಮಕ್ಕಳು ಒಂದು ಗಂಡು ಮತ್ತೊಂದು ಹೆಣ್ಣು ಈತ ಕಿಯವನಾಗಿದ್ದ. ಇವರು ಈ ಭಾಗದಲ್ಲಿ ಸ್ನಾನ ಮಾಡುವುದನ್ನು ಗಮನಿಸಿದ ಸ್ಥಳೀಯರು ಬಹಳಷ್ಟು ಬಾರಿ ಓಡಿಸಿದ್ದು, ಯಾರೂ ಇಲ್ಲದ ಸಂದರ್ಭ ನೋಡಿ ಕದ್ದುಮುಚ್ಚಿ ಈ ಭಾಗದಲ್ಲಿ ನೀರಾಟವಾಡುತ್ತಿದ್ದರು. ಅವರು ಈ ದಿನ ಕಡಲಿಗಿಳಿದ ಸಂದರ್ಭ ಯಾವುದೇ ಮೀನುಗಾರರು ಆ ಭಾಗದಲ್ಲಿ ಇಲ್ಲದ ಕಾರಣ ಬಾಲಕ ನೀರುಪಾಲಾಗುವಂತಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.