ಭಟ್ಕಳದಲ್ಲಿ ಕಡಲಿಗೆ ಈಜಲು ತೆರಳಿದ ಬಾಲಕ ನೀರುಪಾಲು, ಇಬ್ಬರ ರಕ್ಷಣೆ

ಭಟ್ಕಳ : ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನ ಗುಂಡಿ ಸಮುದ್ರ ದಡದಲ್ಲಿ ಈಜಲು ತೆರಳಿದ್ದ ಮೂವರು ಶಾಲಾ ಬಾಲಕರ ಪೈಕಿ ಒಬ್ಬ ನೀರುಪಾಲಾಗಿದ್ದು, ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ಶನಿವಾರದಂದು ಮಧ್ಯಾಹ್ನ ಊಟ ಮುಗಿಸಿದ ಬಳಿಕ ಮೂವರು ಬಾಲಕರಾದ ರತನ್ ಈರಪ್ಪ ನಾಯ್ಕ್, ನಾಗೇಂದ್ರ ತಿಪ್ಪಯ್ಯ ನಾಯ್ಕ್ ಮತ್ತು ಪುನೀತ್ ಕಮಲಾಕರ್ ಮೊಗೇರ್ ತೆಂಗಿನಗುಂಡಿ ಸಮುದ್ರ ತೀರದಲ್ಲಿ ಈಜಲು ತೆರಳಿದ್ದರು. ಮೂವರು 12ರ ಹರೆಯದವರಾಗಿದ್ದು, ನೀರಾಟದಲ್ಲಿ ನಿರತರಾಗಿದ್ದ ವೇಳೆ ಬಂದ ದೊಡ್ಡ ಅಲೆಯೊಂದು ಇವರನ್ನು ಕಡಲಿನತ್ತ ಸೆಳೆದುಕೊಂಡು ಬಿಟ್ಟಿದೆ.

ಇದರಿಂದ ರತನ್ ಈರಪ್ಪ ನಾಯ್ಕ್ ನೀರುಪಾಲಾಗಿದ್ದು, ಕಮಲಾಕರ್ ಮೊಗೇರ್ ಮತ್ತು ನಾಗೇಂದ್ರ ತಿಪ್ಪಯ್ಯ ನಾಯ್ಕನನ್ನು ಸ್ಥಳೀಯ ಮೀನುಗಾರರು ಕೂಡಲೇ ನೀರಿಗೆ ಧುಮುಕಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ.

ಆದರೆ ಇವರಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಇವರನ್ನು ಮೊದಲಿಗೆ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಕುಂದಾಪುರದ ಆಸ್ಪತ್ರೆಗೆ ಕರೆ ತರಲಾಗಿದೆ. ರತನ್ ಮನೆಯಲ್ಲಿ ಪೂಜಾ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಪುನೀತ್ ಮತ್ತು ತಿಪ್ಪಯ್ಯ ಅವರು ಆಗಮಿಸಿದ್ದರು. ಊಟ ಮುಗಿಸಿದ ಬಳಿಕ ಮೂವರೂ ಬೀಚಿಗೆ ಹೋಗಿದ್ದರು.

ಮೂವರು ಬಾಲಕರು ಕೂಡಾ ತೆಂಗಿನಗುಂಡಿ ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ನೀರುಪಾಲಾದ ರತನಗಾಗಿ ಹುಡುಕಾಟ ಮುಂದುವರಿದಿದೆ. ರತನ್ ಈರಪ್ಪ ನಾಯ್ಕ್‍ರವರ ಏಕೈಕ ಪುತ್ರನಾಗಿದ್ದ.

ಸ್ಥಳೀಯ ಮೀನುಗಾರರಾದ ಹೆಬಳೆ ಅಥರ್ ಮೊಹಲ್ಲಾ ನಿವಾಸಿ ಅಝೀಝ್ ಆಹ್ಮದ್ ಅಲಾವ್ ಎಂಬವರು ತಮ್ಮ ಜೀವವನ್ನು ಲೆಕ್ಕಿಸದೇ ಬಾಲಕರಿಬ್ಬರನ್ನು ಕಡಲಿನೊಳಗಿನಿಂದ ರಕ್ಷಿಸಿ ಹೊರತಂದಿದ್ದರು.