ಬ್ರೇಕಪ್ ಆಗಿದ್ದಕ್ಕೆ ಬೇಸರ

ಈಗ ಅವಳಿಗಿಷ್ಟ ಬಂದವರ ಜೊತೆ ಸುತ್ತುತ್ತಾಳೆ. ನಿನಗೇನು? ನಿನ್ನ ಇಷ್ಟಾನಿಷ್ಠ ಕೇಳಿಕೊಂಡು ಅವಳು ಬಾಯ್‍ಫ್ರೆಂಡ್ ಮಾಡಿಕೊಳ್ಳಬೇಕೇ?

ಪ್ರ : ನನಗೀಗ 27 ವರ್ಷ. ಎರಡು ವರ್ಷಗಳಿಂದ ಒಬ್ಬಳ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಅವಳಿಗೂ ನನ್ನದೇ ವಯಸ್ಸು. ನನಗೆ ಅವಳ ಜೊತೆ ಇರುವುದು ಇಷ್ಟವಿದ್ದರೂ ನಾನು ಈಗಲೇ ಮದುವೆಯ ಬಂಧನಕ್ಕೆ ಸಿಕ್ಕಿಕೊಳ್ಳಲು ತಯಾರಿರಲಿಲ್ಲ. ಅವಳು ಈಗ ಕೆಲವು ಸಮಯದಿಂದ ಮದುವೆಯಾಗೋಣ ಅಂತ ಒತ್ತಾಯಿಸುತ್ತಿದ್ದಳು. ನಾನು ಅವಳ ಒತ್ತಡಕ್ಕೆ ಮಣಿದಿರಲಿಲ್ಲ. ಅದಕ್ಕೇ ಅವಳು ನನ್ನಿಂದ ದೂರವಾದಳು. ನನಗೆ ಸ್ವಲ್ಪ ಬೇಸರವಾದರೂ ಕೂಡಲೇ ಮದುವೆಯಾಗುವುದಕ್ಕಿಂತ ನಾವಿಬ್ಬರೂ ದೂರವಾಗಿದ್ದೇ ಒಳ್ಳೆಯದಾಯಿತು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡಿದ್ದೆ. ಆದರೆ ಅವಳೀಗ ಬೇರೆ ಹುಡುಗನ ಜೊತೆ ಸುತ್ತುತ್ತಿದ್ದಾಳೆ. ಆ ಹುಡುಗನನ್ನು ನೋಡಿದರೆ ಮೊದಲಿಂದಲೂ ನನಗೆ ಇಷ್ಟವಿರಲಿಲ್ಲ. ಅನೇಕ ವಿಷಯದಲ್ಲಿ ನನಗೂ ಅವನಿಗೂ ಪೈಪೋಟಿ ಇತ್ತು. ಅವನ ಗುಣವೇ ನನಗೆ ಸರಿಬರುತ್ತಿರಲಿಲ್ಲ. ಅಂತವನ ಜೊತೆ ಇವಳು ಸ್ನೇಹ ಬೆಳೆಸಿದ್ದು ನನಗೆ ಸಹಿಸಲು ಕಷ್ಟವಾಗುತ್ತಿದೆ. ಅಂತಹ ಲೂಸರೇ ಅವಳಿಗೆ ಸಿಗಬೇಕೇ? ಅವಳು ಬೇಕೆಂದೇ ನನ್ನ ಹೊಟ್ಟೆ ಉರಿಸಲು ಅವನ ಸ್ನೇಹ ಮಾಡಿರಬಹುದೇ? ಹಾಗಂತ ನಾನೇನೂ ಈಗ ಮದುವೆಗೆ ರೆಡಿಯಾಗಿಲ್ಲ. ಆದರೂ ಅವಳ ಜೊತೆಗಿನ ರಿಲೇಶನ್‍ಶಿಪ್ಪನ್ನು ಕಡಿದುಕೊಂಡಿದ್ದಕ್ಕೆ ಬೇಸರವಾಗುತ್ತಿದೆ. ನಾನೇನು ಮಾಡಲಿ ಈ ಪರಿಸ್ಥಿತಿಯಲ್ಲಿ?

: ಅಲ್ಲಪ್ಪಾ, ಅವನಿಗೆ ನೀನು ಲೂಸರ್ ಅನ್ನುತ್ತೀಯಲ್ಲಾ. ನೀನೇ ದೊಡ್ಡ ಲೂಸರ್. ನಿನ್ನ ಇರಾದೆ ಏನಂತಲೇ ಅರ್ಥವಾಗುವುದಿಲ್ಲ. ನೀವಿಬ್ಬರೂ ಟೀನೇಜರೂ ಅಲ್ಲ. ನಿನಗೆ ಮದುವೆ ಈಗಲೇ ಬೇಡ ಅಂತಾದರೆ ಕನಿಷ್ಠ ಯಾವಾಗ ಮದುವೆಯಾಗುತ್ತೀ ಅಂತಲೂ ಅವಳಲ್ಲಿ ಕಮಿಟ್ ಮಾಡಿಕೊಳ್ಳದಿದ್ದರೆ ಅವಳಾದರೂ ಎಷ್ಟು ಸಮಯ ಕಾಯುತ್ತಾಳೆ? ಅವಳ ಮದುವೆಯ ವಯಸ್ಸು ಮೀರುತ್ತಿದೆ. ನಿನಗೆ ಹುಡುಗಿಯ ಜೊತೆಗಿನ ಸುತ್ತಾಟ, ಮೋಜು ಎಲ್ಲವೂ ಬೇಕು, ಆದರೆ ಜವಾಬ್ದಾರಿ ಬೇಡ. ಹಾಗಿರುವಾಗ ಅವಳು ಗಟ್ಟಿಮನಸ್ಸು ಮಾಡಿ ನಿನ್ನ ಜೊತೆಗಿನ ಸಂಬಂಧ ಕಡಿದುಕೊಳ್ಳದೇ ಬೇರೇನು ಮಾಡಲು ಸಾಧ್ಯ? ಈಗ ಅವಳಿಗಿಷ್ಟ ಬಂದವರ ಜೊತೆ ಸುತ್ತುತ್ತಾಳೆ. ನಿನಗೇನು? ನಿನ್ನ ಇಷ್ಟಾನಿಷ್ಠ ಕೇಳಿಕೊಂಡು ಅವಳು ಬಾಯ್‍ಫ್ರೆಂಡ್ ಮಾಡಿಕೊಳ್ಳಬೇಕೇ? ನಿನಗಂತೂ ಅವಳ ಪ್ರೀತಿಗೆ ಒಂದು ಅರ್ಥ ಕೊಡುವ ಯೋಗ್ಯತೆಯಿಲ್ಲ. ಅವಳು ತನ್ನ ದಾರಿ ತಾನು ಕಂಡುಕೊಂಡಿದ್ದಕ್ಕೆ ಹೊಟ್ಟೆಯುರಿ ಬೇರೆ. ತನ್ನ ಜೀವನವನ್ನು ರೂಪಿಸಿಕೊಳ್ಳುವ ಎಲ್ಲಾ ಹಕ್ಕೂ ಅವಳಿಗಿದೆ. ಸುಮ್ಮನೇ ಅವರ ಉಸಾಬರಿಗೆ ಹೋಗದೇ ನಿನ್ನ ಪಾಡಿಗೆ ನೀನು ತೆಪ್ಪಗಿರುವುದೇ ಒಳ್ಳೆಯದು.