ಕಣ್ಣೂರಿನಲ್ಲಿ ಬಿಜೆಪಿ ಕಚೇರಿಗೆ ಬಾಂಬ್

ಆರೆಸ್ಸೆಸ್ ಕಾರ್ಯಕರ್ತನ ಮೇಲೆ ದಾಳಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಣ್ಣೂರು ಜಿಲ್ಲೆಯ ತಲಚ್ಚೇರಿಯಲ್ಲಿ  ಅಪರಿಚಿತ ದುಷ್ಕರ್ಮಿಗಳು ಆಟೋ ಚಾಲಕನಾಗಿರುವ ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಮೇಲೆ ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು  ಕೆ ಎಂ ಸುರೇಶ್ (36) ಎಂಬಾತನನ್ನು  ಆತನ ವಾಹನದಿಂದ ಹೊರಗೆಳೆದು  ಕಬ್ಬಿಣದ ರಾಡುಗಳಿಂದ ಆತನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ರಾಜಕೀಯ ವೈಷಮ್ಯದಿಂದ ನಡೆದ ಕೃತ್ಯ ಎಂದು ಪೊಲೀಸರು ಶಂಕಿಸಿದ್ದು  ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆಯೊಂದರಲ್ಲಿ  ಕಣ್ಣೂರಿನ ಪಟ್ಟಾಯಂ ಎಂಬಲ್ಲಿರುವ  ಬಿಜೆಪಿ ಕಚೇರಿ ಮೇಲೆ ಮಂಗಳವಾರ ತಡರಾತ್ರಿ ಬಾಂಬುಗಳನ್ನು ಎಸೆಯಲಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳುಂಟಾಗಿಲ್ಲ, ಆದರೆ ಕಚೇರಿಯ ಕೆಲ ಪೀಠೋಪಕರಣಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೂರಿನ  ಬಿಜೆಪಿ ಕಚೇರಿಯ ಸಮೀಪದಿಂದ ಹಲವಾರು  ಕಬ್ಬಿಣದ ರಾಡುಗಳು ಹಾಗೂ ಚೂರಿಗಳನ್ನು ಪೊಲೀಸರು ವಶಪಡಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಎರಡು ದಾಳಿಗಳು ನಡೆದಿವೆ.

ಎರಡೂ ದಾಳಿಗಳಿಗೆ ಸಿಪಿಐ(ಎಂ) ಕಾರಣವೆಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಕಚೇರಿ ಸಮೀಪ ಶಸ್ತ್ರಾಸ್ತ್ರಗಳನ್ನು ಅಡಗಿಸಿಟ್ಟು ಪಕ್ಷಕ್ಕೆ ಕೆಟ್ಟ ಹೆಸರು ಬರುವಂತೆಯೂ ಸಿಪಿಐ(ಎಂ) ಮಾಡಿದೆ ಎಂದು  ಬಿಜೆಪಿ ದೂರಿದೆ.

ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆಂದು ಆರೋಪಿಸಿ ಅಕ್ಟೋಬರ್ 9ರಂದು ಸಿಪಿಐ(ಎಂ) ಕಣ್ಣೂರು ಜಿಲ್ಲೆಯ ಪಾಣೂರು ಎಂಬಲ್ಲಿ ಹರತಾಳ ನಡೆಸಿತ್ತು. ಕೈವೆಲ್ಲಿಕಲ್ ಎಂಬಲ್ಲಿ ಸಿಪಿಐ(ಎಂ) ಕಾರ್ಯಕರ್ತರ ಮೆರವಣಿಗೆ ವೇಳೆ ನಡೆದ ದಾಳಿಯಲ್ಲಿ ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ 14 ಮಂದಿ ಗಾಯಗೊಂಡಿದ್ದರು.

ಎಡ ಪಕ್ಷದ ವಿರುದ್ಧ ಬಿಜೆಪಿ ಸಂಘಟಿಸಿರುವ ಜನರಕ್ಷಾ ಯಾತ್ರೆ ಅಕ್ಟೋಬರ್ 3ರಂದು ಆರಂಭಿಸಲಾಗಿದ್ದರೆ,  ಈ  ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿನ ರಾಜಕೀಯ ಹಿಂಸಾಚಾರಕ್ಕೆ  ಕಮ್ಯುನಿಸ್ಟ್ ಪಕ್ಷವೇ ಕಾರಣವೆಂದು ಆರೋಪಿಸಿದ್ದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲೂ ವಾಗ್ದಾಳಿ ನಡೆಸಿದ್ದ ಶಾ ರಾಜ್ಯದಲ್ಲಿನ ಅತೀ ಹೆಚ್ಚು ರಾಜಕೀಯ ಹಿಂಸಾಚಾರ ಮುಖ್ಯಮಂತ್ರಿಯ ತವರು ಜಿಲ್ಲೆಯಾದ ಕಣ್ಣೂರಿನಲ್ಲಿಯೇ ನಡೆದಿದೆ ಎಂದೂ ಆರೋಪಿಸಿದ್ದರು.