`ದಂಗಾಲ್’ ಚಿತ್ರಕ್ಕೆ ಬಾಲಿವುಡ್ ಫಿದಾ

 

ಇಂದು ತೆರೆಕಾಣುತ್ತಿರುವ ಆಮೀರ್ ಖಾನ್ ಅಭಿನಯದ `ದಂಗಾಲ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಮೊನ್ನೆ ನಡೆದಿದ್ದು ಅದನ್ನು ನೋಡಿದ ಬಾಲಿವುಡ್ ಮಂದಿ ನಿಜಕ್ಕೂ ದಂಗಾಗಿಬಿಟ್ಟಿದ್ದಾರೆ. ಕೆಲವರಂತೂ ಇದು ಈ ವರ್ಷದ ಅತ್ಯುತ್ತಮ ಚಿತ್ರ ಎಂದು ಆಗಲೇ ಡಿಕ್ಲಾರ್ ಮಾಡಿಬಿಟ್ಟಿದ್ದಾರೆ.
ಫಿಲ್ಮ್ ಮೇಕರ್ ಶಿರಿಸ್ ಕುಂದರ್ ಚಿತ್ರ ನೋಡಿ `ಬಹುಸಮಯಗಳ ನಂತರ ಇಂತಹ ಒಳ್ಳೆಯ ಚಿತ್ರ ನೋಡಿದೆ. ಇದು ಬಹುಸಮಯಗಳವರೆಗೆ ಬೆಸ್ಟ್ ಫಿಲ್ಮ್ ಆಗಿಯೇ ಉಳಿಯುತ್ತದೆ’ ಎಂದು ಭವಿಷ್ಯ ಸಹ ನುಡಿದಿದ್ದಾರೆ. ಸಿನಿಮಾ ವಿಮರ್ಶಕ ಅನುಪಮ್ ಚೋಪ್ರಾ ಚಿತ್ರದ ಬಗ್ಗೆ ಬರೆಯುತ್ತಾ `ಮಹಿಳೆಯರಿಗೆ ಮತ್ತು ಆಟಗಾರರಿಗೆ ಇದು ಮಹತ್ವದ ಸ್ಪೂರ್ತಿ ನೀಡುವ ಚಿತ್ರ. ಅಮೀರ್ ಖಾನ್ ನಟನೆಯಂತೂ ಅದ್ಭುತ’ ಎಂದು ಹೊಗಳಿದ್ದಾರೆ. ಇನ್ನೊಬ್ಬ ನಿರ್ದೇಶಕ ಪ್ರಸೂನ್ ಜೋಶಿ `ಇದೊಂದು ಅಮೀರ್ ನಟನೆಯ ಮೈಲಿಗಲ್ಲಿನ ಚಿತ್ರ. ಸಿನಿಮಾದಲ್ಲಿಯ ಇಬ್ಬರು ಹುಡುಗಿಯರು ಮತ್ತು ಚಿತ್ರ ನಿರ್ದೇಶಕ ನಿತೇಶ್ ತಿವಾರಿಗೆ ಹ್ಯಾಟ್ಸಾಫ್’ ಹೇಳಿದ್ದಾರೆ. ತುಷಾರ್ ಕಪೂರ್ ಅಂತೂ ಚಿತ್ರ ನೋಡಿ `ಸಿನಿಮಾ ಹೊಗಳಲು ಪದಗಳೇ ಸಿಗುತ್ತಿಲ್ಲ. ನಿರೀಕ್ಷೆಗೆ ಮೀರಿ ಚಿತ್ರ ಚೆನ್ನಾಗಿದೆ’ ಎಂದಿದ್ದಾನೆ.
ಚಿತ್ರದಲ್ಲಿ ಅಮೀರ್ ಖಾನ್ ಪತ್ನಿ ಪಾತ್ರವಹಿಸಿದ ಸಾಕ್ಷಿ ತನ್ವಾರ್ ಹಾಗೂ ಅವರ ಕುಸ್ತಿಪಟು ಹೆಣ್ಣುಮಕ್ಕಳ ಪಾತ್ರಧಾರಿಗಳಾದ ಸಾನ್ಯಾ ಮಲ್ಹೋತ್ರಾ ಹಾಗೂ ಫಾತಿಮಾ ಸಾನಾ ಶೇಕ್ ಅವರ ನಟನೆಯ ಬಗ್ಗೆಯೂ ಮೆಚ್ಚುಗೆಯ ಮಹಾಪೂರವೇ ಹರಿದಿದೆ.
ಈ ಮೊದಲೇ ಕರಣ್ ಜೋಹರ್, ಶಬಾನಾ ಆಜ್ಮಿ, ಸಚಿನ್ ತಂಡೂಲ್ಕರ್ ಈ ಸಿನಿಮಾ ನೋಡಿ ಬಹಳ ಮೆಚ್ಚಿಕೊಂಡಿದ್ದರು. ಈ ಸಿನಿಮಾ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಟ್ ಹಾಗೂ ಅವರ ಕುಸ್ತಿ ಚಾಂಪಿಯನ್ಸ್ ಹೆಣ್ಣುಮಕ್ಕಳ ಜೀವನಾಧರಿತ ಕತೆಯಾಗಿದೆ. ಈ ಸಿನಿಮಾಗಾಗಿ ಆಮೀರ್ ಖಾನ್ ಬಹಳಷ್ಟು ಶ್ರಮವಹಿಸಿದ್ದಾರೆ.