ಹೂತು ಹಾಕಿದ ಸಂತೋಷ್ ಶವ ಮೇಲಕ್ಕೆತ್ತಿದ ಪೊಲೀಸ್

8 ಕೊಲೆ ಆರೋಪಿಗಳ ಬಂಧನ

ನಮ್ಮ ಪ್ರತಿನಿಧಿ ವರದಿ
ಉಡುಪಿ : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಮಣಿಪಾಲ ಸಮೀಪದ ಪರ್ಕಳ ಸಣ್ಣಕ್ಕಿಬೆಟ್ಟು ನಿವಾಸಿ ಸಂತೋಷ್ ನಾಯಕ(38)ನನ್ನು ಮನೆಯಿಂದ ಅಪಹರಿಸಿ, ಕೊಲೆಗೈದು ಪಾಳು ಬಾವಿಯೊಂದರಲ್ಲಿ ಹೂತುಹಾಕಿದ್ದ ಏಂಟು ಮಂದಿ ಕೊಲೆ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ಉಡುಪಿ ಜಿಲ್ಲಾ ಎಸ್ ಪಿ ಬಾಲಕೃಷ್ಣ ಬುಧವಾರ ಸುದ್ದಿಗಾರರಿಗೆ ತಿಳಿಸಿದರರು.
ಕಾರ್ಕಳ ತಾಲೂಕು ಬೈಲೂರು ಸಮೀಪದ ಎರ್ಲಪಾಡಿ ನಿವಾಸಿ ಪ್ರಸಾದ್, ಮಂಗಳೂರು ಕೃಷ್ಣಾಪುರ ನಿವಾಸಿ ದಯಾನಂದ, ಉಡುಪಿಯ ವಿಲ್ ಫ್ರೆಡ್ ಯಾನೆ ವಿನ್ನು, ಹಿರಿಯಡ್ಕ ನಿವಾಸಿ ಜಯಂತ್ ಪೈ, ಪೆರ್ಣಂಕಿಲ ನಿವಾಸಿಗಳಾದ ಕೃಷ್ಣ, ರಮೇಶ್, ಪೆರ್ಣಂಕಿಲ ಸಮೀಪದ ಮರ್ಣೆ ನಿವಾಸಿ ಮಹೇಶ್ ಆಚಾರಿ ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ಹಿರಿಯಡ್ಕದ ನಿತ್ಯಾನಂದ ನಾಯಕ್ ತಲೆಮರೆಸಿಕೊಂಡಿದ್ದಾನೆ.
ಕೊಲೆಯಾದ ಸಂತೋಷ್ ನಾಯಕನು ಮಣಿಪಾಲದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದಲ್ಲದೇ, ಗುಜರಿ, ಸಿಮೆಂಟ್ ಸಹಿತ ಇನ್ನಿತರ ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇನೆಂದು ವಸ್ತುಗಳನ್ನು ತೋರಿಸಿ ಉಡುಪಿ ಮತ್ತು ಮಂಗಳೂರಿನ ಹಲವಾರು ವ್ಯಕ್ತಿಗಳಿಂದ ಲಕ್ಷಗಟ್ಟಲೇ ಹಣ ಪಡೆದುಕೊಂಡು ವಂಚನೆ ನಡೆಸಿದ್ದು, ಈಗಾಗಲೇ 1.10 ಕೋಟಿ ವಂಚನೆ ನಡೆಸಿರುವುದು ಗೊತ್ತಾಗಿದೆ ಎಂದು ಎಸ್ ಪಿ ತಿಳಿಸಿದರು.
ವಂಚನೆಗೊಳಗಾದ ಆರೋಪಿಗಳಾದ ನಿತ್ಯಾನಂದ ನಾಯಕ್, ಜಯಂತ್ ಪೈ ಹಾಗೂ ವಿಲ್ ಫ್ರೆಡ್ ಯಾನೆ ವಿನ್ನು ಸೇರಿಕೊಂಡು 5-6 ವರ್ಷಗಳಿಂದ ಹಣ ನೀಡದೇ ಸತಾಯಿಸುತ್ತಿದ್ದ ಸಂತೋಷ್ ನಾಯಕನಿಂದ ಹಣ ವಸೂಲಿ ಮಾಡುವಂತೆ ಹಿರಿಯಡ್ಕ ಸಮೀಪದ ಓಂತಿಬೆಟ್ಟು ಗ್ರಾಮದ ವರ್ವಾಡಿ ನಿವಾಸಿ, ಡಿಸೆಂಬರ್ 19ರಂದು ಹಿರಿಯಡ್ಕ ಸಮೀಪದ ಕೋಟ್ನಕಟ್ಟೆ ದಿಯಾ ಬಾರ್ ಎದುರು ಕೊಲೆಯಾದ ರೌಡಿಶೀಟರ್ ವರ್ವಾಡಿ ಪ್ರವೀಣ್ ಕುಲಾಲಗೆ ಸುಪಾರಿ ನೀಡಿದ್ದರು. 2016, ಡಿಸೆಂಬರ್ 2ರಂದು ಬೆಳಿಗ್ಗೆ ಕೊಲೆಯಾದ ಪ್ರವೀಣ್ ಕುಲಾಲ್ ಹಾಗೂ ಬಂಧಿತ ಆರೋಪಿಗಳ ತಂಡವು ಸಂತೋಷ್ ನಾಯಕನನ್ನು ಹೆಂಡತಿ ಸುಮಿತ್ರಾ ನಾಯಕ್ ಮನೆಯಾದ ಪೆರ್ಣಂಕಿಲ ಸಮೀಪದ ಕುದಿ ಗ್ರಾಮದಿಂದ ಅಪಹರಿಸಿ, ಕೊಲೆ ಮಾಡಿ ವರ್ವಾಡಿಗೆ ತಂದು ಕಾಲುಗಳನ್ನು ಕತ್ತರಿಸಿ, ಗೋಣಿ ಚೀಲಕ್ಕೆ ಹಾಕಿ ಪೆರ್ಣಂಕಿಲ ಕಾಡಿನಲ್ಲಿರುವ ಒಂದು ಪಾಳು ಬಾವಿಯಲ್ಲಿ ಹೂತು ಹಾಕಿದ್ದರು.
ಹೂತು ಹಾಕಿದ ಶವವನ್ನು ಪೊಲೀಸರು ಬುಧವಾರ ಹೊರತೆಗೆದು ಶವದ ಮೂಳೆ, ಎಲುಬುಗಳನ್ನು ಡಿ ಎನ್ ಎ ಪರೀಕ್ಷೆಗೆ ಕಳುಹಿಸಲಾಗಿದೆ. ನಮ್ಮನ್ನೂ ಪ್ರವೀಣ್ ತಂಡವು ಕೊಲೆ ನಡೆಸಬಹುದೆಂಬ ಹೆದರಿಕೆಯಿಂದ ಸಂತೋಷನ ಮನೆಯವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಕೊಲೆ ಆರೋಪಿ ಕಮ್ ರೌಡಿಶೀಟರ್ ಪ್ರವೀಣ್ ಕುಲಾಲ್ 2016, ಡಿಸೆಂಬರ್ 19ರಂದು ಕೊಲೆ ಆದ ನಂತರ ಸಂತೋಷ್ ನಾಯಕ್ ಪತ್ನಿ ಸುಮಿತ್ರಾ ನಾಯಕ್ ಗಂಡನನ್ನು ಪ್ರವೀಣ್ ಕುಲಾಲ್ ತಂಡವು ಅಪಹರಿಸಿ ಕೊಲೆ ನಡೆಸಿದ್ದಾರೆ ಎಂದು ಶಂಕಿಸಿ ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರು ಎಂದು ಎಸ್ ಪಿ ವಿವರಿಸಿದರು.