53 ವರ್ಷಗಳಿಂದ ಪ್ರಯಾಣಿಕರ ಸೇವೆಯಲ್ಲಿ ಅಂಬಿಗ ನಾರಾಯಣ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಒಂದರೆಡಲ್ಲ ಬರೋಬ್ಬರಿ 53 ವರ್ಷಗಳಿಂದ ಈ ಅಂಬಿಗ ದೋಣಿಯಲ್ಲಿ ಹುಟ್ಟು ಹಾಕುತ್ತಲೇ ಇದ್ದಾರೆ. ಈಗಲೂ ಕೂಡಾ ಇವರ ಉತ್ಸಾಹ ಕುಂದಿಲ್ಲ. ಇಳಿ ಹರೆಯದಲ್ಲೂ ಇವರ ಕಾಯಕ ನಿತ್ಯವೂ ಸಾಗಿದೆ.

ಇವರು ಮಂಗಳೂರು ಹೊರವಲಯದ ಪಾವೂರು ಗ್ರಾಮದ ಇನೋಳಿಯ ನಾಟರಗೋಲಿ ನಿವಾಸಿ 70ರ ಹರೆಯದ ನಾರಾಯಣ ಸಪಲ್ಯ. ನೇತ್ರಾವತಿಯ ಫರಂಗಿಪೇಟೆಯಿಂದ ಇನೋಳಿ ಕಡೆಗೆ ತಮ್ಮ ದೋಣಿ ಮೂಲಕ ಪ್ರಯಾಣಿಕರನ್ನು ಸಾಗಿಸುವ ಮೂಲಕ ಅಲ್ಪಸ್ವಲ್ಪ ಸಂಪಾದನೆ ಮಾಡುತ್ತಿದ್ದಾರೆ. ಮಳೆ, ಚಳಿ, ಗಾಳಿ, ಬಿಸಿಲು ಎನ್ನದೇ ತನ್ನ ದೋಣಿಯಲ್ಲಿ ಪ್ರಯಾಣಿಕರನ್ನು ತುಂಬಿಸಿ ನಗುಮೊಗದಿಂದ ಕೆಲಸ ಮಾಡುತ್ತಿದ್ದಾರೆ.

ಮೂಲಭೂತ ಸೌಕರ್ಯ ವಂಚಿತ ಇನೋಳಿಯಲ್ಲಿ ಜನ ಕೃಷಿಕಾರ್ಯವನ್ನು ಅವಲಂಬಿಸಿದವರು. ಇವರೆಲ್ಲರೂ ಪಕ್ಕದ ಫರಂಗಿಪೇಟೆಯನ್ನೇ ಎಲ್ಲದಕ್ಕೂ ಆಶ್ರಯಿಸಬೇಕು. ಅಲ್ಲಿ ಜನರಿಗೆ ನದಿ ದಾಟಲು ಯಾವುದೇ ಸಾಧನ ಇಲ್ಲದ ಸಂದರ್ಭ ನಾರಾಯಣ ಸಪಲ್ಯರ ತಂದೆ ಓಮಯ್ಯ ಸಪಲ್ಯ ಅವರು ಚಿಕ್ಕ ದೋಣಿ ನದಿಗೆ ಇಳಿಸಿ ಇನೋಳಿಯಿಂದ ಫರಂಗಿಪೇಟೆಗೆ ಜನರನ್ನು ಸಾಗಿಸುತ್ತಿದ್ದರು. ಅಂದು ಪುಟ್ಟ ಮಗುವಾಗಿದ್ದ ನಾರಾಯಣ ಸಪಲ್ಯ ತಂದೆಯೊಂದಿಗೆ ಸೇರಿ ಇದನ್ನೇ ತನ್ನ ಕಾಯಕವನ್ನಾಗಿಸಿ ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಇನ್ನೊಂದು ಅಚ್ಚರಿ ಸಂಗತಿ ಅಂದ್ರೆ ಬೆಳಗ್ಗಿನ ಉಪಾಹಾರ, ಮಾಧ್ಯಾಹ್ನದ ಊಟ, ಸಂಜೆ ಚಾ ಎಲ್ಲವೂ ದೋಣಿಯಲ್ಲೇ…! ಇವರ ಈ ಸೇವಾ ಕಾರ್ಯವನ್ನು ನೋಡಿ ಪ್ರಯಾಣಿಕರು ಕೂಡಾ ಇವರಿಗೆ ಮನೆಯಿಂದ ತಿಂಡಿ ತಂದು ಕೊಟ್ಟಿರುವುದು ಉಂಟು..!

1974ರಲ್ಲಿ ಬಂದ ಪ್ರವಾಹ ಇಲ್ಲಿಯ ಜನರ ಬದುಕನ್ನೇ ಬರ್ಬರಗೊಳಿಸಿತ್ತು. ಅಂದು ಅದೆಷ್ಟೋ ಮನೆ, ಜಾನುವಾರುಗಳ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಇನೋಳಿಯಿಂದ ಮಂಗಳೂರಿಗೆ ಇದೀಗ ಬಸ್ ಬಂದಿದೆ. ಹಾಗಿದ್ದರೂ ನನ್ನ ದೋಣಿಯಲ್ಲಿ ಜನ ಬರುವುದು ನಿಲ್ಲಿಸಿಲ್ಲ. ಸಂಖ್ಯೆ ಕಡಿಮೆಯಾಗಿದೆ. ನನಗಂತೂ ಈ ಕಾಯಕದಲ್ಲಿ ಖುಷಿ ಇದೆ. ಸಾಧ್ಯವಾದಷ್ಟು ಕಾಲ ನನ್ನ ಸೇವೆ ಪ್ರಯಾಣಿಕರಿಗೆ ಇರುತ್ತೆ ಅಂತಾರೆ ನಾರಾಯಣ ಸಪಲ್ಯ.