ಠುಸ್ಸಾಯಿತು ಕಪ್ಪುಹಣದ ಗುಳ್ಳೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೇಂದ್ರ ಸರಕಾರ ನೀಡಿದ ಐವತ್ತು ದಿವಸಗಳ ಗಡು ಹತ್ತಿರವಾಗುತ್ತಿದ್ದಂತೆ ಭಾರತ ದೇಶದ ಅಗೋಚರವಾಗಿರುವ ಕಪ್ಪು ಹಣವೆಂಬ ಗುಳ್ಳೆ ಠುಸ್ಸಾಗಿದೆ.

ಮೊದಲಿಗೆ ಚುನಾವಣೆ ಸಮಯದಲ್ಲಿ ವಿದೇಶಿ ಸ್ವಿಸ್ ಬ್ಯಾಂಕುಗಳಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಬ್ಯಾಂಕ್ ಖಾತೆಗೆ ತಲಾ ಹದಿನೈದು ಲಕ್ಷ ರೂಪಾಯಿ ಠೇವಣಿ ಹಾಕುವ ಘೋಷಣೆ ಸುಳ್ಳಾಗಿತ್ತು. ಅನಂತರ ದೇಶದಲ್ಲೇ ಇರುವ ಕಾಳಧನಿಕರನ್ನು ಹೆಡೆಮುರಿ ಕಟ್ಟುವ ಕಾರ್ಯಕ್ರಮಗಳು ಕೂಡ ನಿರೀಕ್ಷಿತ ಪ್ರಯೋಜನ ನೀಡಲಿಲ್ಲ.

ಕಳೆದ ನವೆಂಬರ್ ತಿಂಗಳಲ್ಲಿ ಕಪ್ಪು ಹಣ ಪತ್ತೆ ಮಾಡಲು, ಭಯೋತ್ಪಾದಕರಿಗೆ ಹಣ ಹರಿಯದಂತೆ ನಿಯಂತ್ರಣ ಮತ್ತು ನಕಲಿ ನೋಟುಗಳ ನಿಯಂತ್ರಣಕ್ಕಾಗಿ ಐನೂರು ಮತ್ತು ಸಾವಿರ ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ನಮೋ ಭಕ್ತ ಸಮುದಾಯ ಮಾತ್ರ ಅಲ್ಲ, ಬಹುತೇಕ ಭಾರತೀಯರು ಏನೋ ಒಳ್ಳೆಯದಾಗುತ್ತದೆ ಎಂದು ಸಾಮೂಹಿಕ ಭಜನೆಯಲ್ಲಿ ತೊಡಗಿದರು. ಈಗ ಭಜನೆಯ ಮಂಗಳಾರತಿಯ ಸಮಯ ಬಂದಿದ್ದು, ಎಲ್ಲವೂ ಮಂಕುಬೂದಿ ಎರಚುವ ಕಾರ್ಯಕ್ರಮ ಎಂಬುದು ನಿಧಾನವಾಗಿ ಗೊತ್ತಾಗತೊಡಗಿದೆ.

ಏನಿಲ್ಲವೆಂದರೂ ಮೂರೂವರೆ ದಶ ಲಕ್ಷ ಕೋಟಿ ರೂಪಾಯಿ ಕಪ್ಪು ಹಣ ದೇಶದ ಆರ್ಥಿಕ ವ್ಯವಸ್ಥೆಯಿಂದ ಹೊರ ಹೋಗಲಿದೆ ಎಂಬುದು ಬಿಜೆಪಿ ಸರಕಾರದ ಅಂದಾಜಾಗಿತ್ತು. ಈಗ ಡಿಸೆಂಬರ್ 30ನೇ ತಾರೀಕಿಗೆ ಮೂವತ್ತು ದಿನಗಳು ಇರುವಾಗ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಅಧಿಕೃತ ದಾಖಲೆ ಪ್ರಕಾರ ಈಗಾಗಲೇ ಶೇಕಡ 90ರಷ್ಟು ಹಳೇ ನೋಟುಗಳು ಬ್ಯಾಂಕ್ ತಿಜೋರಿಗೆ ಬಂದುಬಿದ್ದಿದೆ. ಹಾಗಿರುವಾಗ ಕಪ್ಪು ಹಣ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಕೇಂದ್ರ ಸರಕಾರ ಉತ್ತರ ನೀಡುತ್ತದೆಯೇ ಎಂದು ಕಾದು ನೋಡಬೇಕಾಗಿದೆ.

ಕೇಂದ್ರ ಸರಕಾರದ ಪ್ರಕಾರ ಐನೂರು ಮತ್ತು ಸಾವಿರ ರೂಪಾಯಿಯ 15.4 ದಶ ಲಕ್ಷ ಕೋಟಿ ರೂಪಾಯಿ ಚಲಾವಣೆಯಲ್ಲಿ ಇತ್ತು. ಇದುವರೆಗೆ, ಬ್ಯಾಂಕುಗಳಿಗೆ 14 ದಶ ಲಕ್ಷ ಕೋಟಿ ರೂಪಾಯಿ ವಾಪಾಸಾಗಿದೆ. ಕೊನೆ ಕ್ಷಣದಲ್ಲಿ ಒಂದಷ್ಟು ಹಳೇ ನೋಟುಗಳು ಜಮೆ ಆಗಬಹುದು. ಅನಂತರ ಉಳಿಯಿತು ಕೇವಲ ಒಂದು ದಶ ಲಕ್ಷ ಕೋಟಿ ರೂಪಾಯಿ ಮಾತ್ರ ಬ್ಯಾಂಕಿಗೆ ವಾಪಾಸಾಗಲು ಬಾಕಿ ಇರುವುದು. ಸರಕಾರದ ಲೆಕ್ಕಚಾರದ ಪ್ರಕಾರವೇ ಎರಡು ದಶ ಲಕ್ಷ ಕೋಟಿ ರೂಪಾಯಿ ಹಳೇ ನೋಟುಗಳು ಹಳೇ ನೋಟಿಗೆ ಬದಲಾವಣೆಗೊಂಡಿವೆ. ಮಾತ್ರವಲ್ಲದೆ, ಇದು ಸರಕಾರದ ಕೈಗೆ ಸಿಗದೇ ಕಪ್ಪು ಹಣವಾಗಿಯೇ ಹೊಸ ನೋಟಿನ ರೂಪದಲ್ಲಿ ಮತ್ತೆ ಚಲಾವಣೆಗೆ ತೊಡಗಿದೆ ಎಂದಾಯಿತು. ಇದು ವಾಸ್ತವ ಕೂಡ.

ಭಾರತದಂತಹ 135 ಕೋಟಿ ಜನಸಂಖ್ಯೆಯ ಬೃಹತ್ ದೇಶದಲ್ಲಿ ನೋಟು ಅಮಾನ್ಯ ಮಾಡುವುದು ಸೇರಿದಂತೆ ಯಾವುದೇ ರೀತಿಯ ಕಾನೂನು ಕ್ರಮಗಳಿಗೆ ನೂರಾರು ಕಳ್ಳದಾರಿಗಳು ವ್ಯವಸ್ಥೆಯಲ್ಲಿ ಧಾರಾಳವಾಗಿ ಇವೆ.

ಆರ್ ಬಿ ಐ ಕಾಲ ಕಾಲಕ್ಕೆ ಐವತ್ತಕ್ಕೂ ಹೆಚ್ಚು ಸುತ್ತೋಲೆಗಳನ್ನು ಹೊರಡಿಸಿ ಕಪ್ಪು ಹಣ ಹೋಸ ನೋಟಾಗಿ ಪರಿವರ್ತನೆ ಆಗುವುದನ್ನು ನಿಯಂತ್ರಿಸಲು ಹೆಣಗಾಡಿದೆ. ಕೇಂದ್ರ ಬ್ಯಾಂಕಿನ ಇಂತಹ ನಡೆಗಳಿಂದಾಗಿಯೇ ಸ್ವಲ್ಪ ಮಟ್ಟಿನ ನಿಯಂತ್ರಣ ಆಗಿರುವ ಸಾಧ್ಯತೆ ಇದೆ. ಇಲ್ಲದೆ ಹೋಗಿದ್ದಲ್ಲಿ ಸರಕಾರ ಲೆಕ್ಕ ಹಾಕಿರುವುದಕ್ಕಿಂತಲೂ ಹೆಚ್ಚು ಹಳೇ ನೋಟುಗಳು ಬ್ಯಾಂಕಿಗೆ ಬಂದು ಬೀಳುವುದನ್ನು ಅಲ್ಲಗಳೆಯುವಂತಿಲ್ಲ.

ಇದರೊಂದಿಗೆ ಕಾಳಧನಿಕರನ್ನು ಪತ್ತೆ ಮಾಡಿ ಅವರಿಂದ ಮೂರು ವರ್ಷಗಳ ಠೇವಣಿ ಪಡೆಯುವ, ಶೇಕಡ ಐವತ್ತು ದಂಡ ವಿಧಿಸುವ ಅವಕಾಶಗಳು ಕೂಡ ಕೇಂದ್ರ ಸರಕಾರಕ್ಕೆ ದೊರೆತ್ತಿಲ್ಲ. ಕಪ್ಪು ಹಣ ಪತ್ತೆ ಮಾಡಲು ಹೋಗಿ ಸರಕಾರ ನಗೆಪಾಟಲಿಗೆ ಈಡಾಗುವ ಮುನ್ನವೇ ಕ್ಯಾಶ್ ವೆಸ್ ಆರ್ಥಿಕತೆಯ ಬಾಣವನ್ನು ಬತ್ತಳಿಕೆಯಿಂದ ಹೊರತೆಗೆದಿದ್ದು ಈಗ ಕಪ್ಪು ಹಣದ ವಿಚಾರ ಮಾತನಾಡುವವರೇ ಇಲ್ಲ.