ಅಧಿಕಾರಿಗಳ ಬಳಿ 152 ಕೋಟಿ ರೂ ಪತ್ತೆಯಾಗಿದ್ದು ರಾಜ್ಯದ ಪಾಲಿಗೆ ಕರಾಳ ದಿನ : ಜನಾರ್ದನ ಪೂಜಾರಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ರಾಜ್ಯದ ಇಬ್ಬರು ಅಧಿಕಾರಿಗಳ ಬಳಿ 152 ಕೋಟಿ ರೂ ಅಕ್ರಮ ಹಣ ಪತ್ತೆಯಾಗಿರುವುದು ರಾಜ್ಯದ ಜನರ ಪಾಲಿಗೆ ಕರಾಳ ದಿನವಾಗಿದೆ” ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ದನ ಪುಜಾರಿ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈಗಾಗಲೇ ಸಚಿವ ಮಹದೇವಪ್ಪರ ಹೆಸರು ಈ ಪ್ರಕರಣದಲ್ಲಿ ಕೇಳಿ ಬಂದಿದೆ. ಮುಖ್ಯಮಂತ್ರಿಗಳೇ ನಿಮಗೆ ತಾಕತ್ತಿದ್ದರೆ ಮೊದಲು ಈ ಇಬ್ಬರು ಅಧಿಕಾರಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಿ. ಸಿಕ್ಕಿರುವುದರಲ್ಲಿ ಕಪ್ಪು ಹಣ ಎಷ್ಟಿದೆ ಎಂದು ಮೊದಲು ತಿಳಿಸಿ” ಎಂದರು.

“ಅಲ್ಲಿ ಸಿಕ್ಕಿರುವ ಹಣಕ್ಕೆ ಸಂಬಂಧಿಸಿ ಕೋಡ್ ವರ್ಡ್ ಮೂಲಕ ಬಿಗ್ ಬಾಸ್ ಎಂದು ಬರೆದಿರುವುದು ಪತ್ತೆಯಾಗಿದೆ. ಇದು ಯಾರನ್ನು ಉಲ್ಲೇಖಿಸಿ ಬರೆದಿದ್ದು. ಅದು ಮುಖ್ಯಮಂತ್ರಿಯೇ” ಎಂದು ಪೂಜಾರಿ ಎಂದಿನ ತಮ್ಮ ಸ್ಟೈಲಿನಲ್ಲಿ ಗರಂ ಆಗಿಯೇ ಪ್ರಶ್ನಿಸಿದ್ದಾರೆ.

“ಒಬ್ಬ ಸಚಿವ ಮಹದೇವಪ್ಪನವರಾಗಿದ್ದು, ಉಳಿದಿಬ್ಬರು ಯಾರು ?, ಅದರಲ್ಲಿ ಒಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಜನ ಸಂಶಯ ವ್ಯಕ್ತಪಡಿಸಿದ್ದಾರೆ” ಎಂದು ಪೂಜಾರಿ ಹೇಳಿದರು.

ಕೇಂದ್ರ ಸರಕಾರದ ವಿರುದ್ಧವೂ ಹರಿಹಾಯ್ದ ಪೂಜಾರಿ, “ಸಿಬಿಐ ಇವತ್ತು ಬಿಜೆಪಿಯ ಬ್ಯೂರೋ ಆಫ್ ಇನ್ವೇಸ್ಟಿಗೇಶನ್ ಆಗಿದೆ. ಪ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇನೆಯ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿಯೇ ಇದೆ. ಸೇನೆಯನ್ನು ಕೇಂದ್ರ ಸರಕಾರ ದುರ್ಬಲಗೊಳಿಸಿದೆ. ರಕ್ಷಣಾ ಸಚಿವರು ಬಿಜೆಪಿಯನ್ನು ರಕ್ಷಿಸುತ್ತಿದ್ದಾರೆ” ಎಂದರು.