ಉತ್ತರ ಕನ್ನಡ ಅರಣ್ಯದಲ್ಲಿ ಕಪ್ಪು ಚಿರತೆ ರಸ್ತೆ ಅಪಘಾತದಲ್ಲಿ ಸಾವು

ಬೆಂಗಳೂರು : ಇತ್ತೀಚೆಗೆ ಹೊನ್ನಾವರ ಅರಣ್ಯ ವಿಭಾಗದ ರಸ್ತೆಯೊಂದರಲ್ಲಿ ಸಂಭವಿಸಿದ ರಸ್ತೆ ಅಪಘಾತಕ್ಕೀಡಾಗಿದ್ದ ಅಪೂರ್ವ ಕಪ್ಪು ಚಿರತೆಯ ಜರ್ಜರಿತ ಕೆಲವು ಭಾಗಗಳು ಪತ್ತೆಯಾಗಿದ್ದು, ಅಧಿಕಾರಿಗಳು ಮತ್ತು ವನ್ಯಜೀವಿ ತಜ್ಞರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

2009-16ರ ಅವಧಿಯಲ್ಲಿ ಹೊನ್ನಾವರ ಅರಣ್ಯ ವಿಭಾಗದಲ್ಲಿ ನಾಲ್ಕು ಚಿರತೆ ಸತ್ತಿವೆ. ಇವುಗಳಲ್ಲಿ ಮೂರು ಚಿರತೆಗಳು ರಸ್ತೆಯಲ್ಲಿ ಸತ್ತು ಬಿದ್ದಿದ್ದರೆ, ಇನ್ನೊಂದು ಚಿರತೆ ರೈಲಿನಡಿಗೆ ಬಿದ್ದಿತ್ತು. ಶಿಕಾರಿಗಳ ಗುಂಡೇಟಿಗೆ ಸತ್ತಿದ್ದ ಸ್ಥಿತಿಯಲ್ಲಿ ಇನ್ನೆರಡು ಚಿರತೆಗಳೂ ಪತ್ತೆಯಾಗಿತ್ತು. ಇತ್ತೀಚೆಗೆ ಹೀರೆಗುತ್ತಿ ಪ್ರಾಂತ್ಯದ ಗುಂಡಬಾಳ ವಲಯದಲ್ಲಿ ದುಷ್ಕರ್ಮಿಗಳಿಂದ ತಲೆ ಮತ್ತು ಕಾಲುಗಳ ಕತ್ತರಿಸಲ್ಪಟ್ಟಿದ್ದ ಕಪ್ಪು ಚಿರತೆ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಅಂತಾರಾಜ್ಯದ ಯಾವುದೇ ಗ್ಯಾಂಗಿನ ನಂಟಿರುವುದು ತನಿಖೆಯಿಂದ ಪತ್ತೆಯಾಗಿಲ್ಲ ಎಂದು ಹೊನ್ನಾವರ ಡಿಸಿಎಫ್ ವಸಂತ್ ರೆಡ್ಡಿ ಹೇಳಿದರು.

“ಇಬ್ಬರನ್ನು ಬಂದಿಸಲಾಗಿದ್ದು, ಇನ್ನೊಬ್ಬ ಮಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾನೆ. ಪ್ರಾಣಿಯ ತಲೆ ವಶಕ್ಕೆ ತೆಗೆದುಕೊಂಡು, ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಇದೊಂದು ರಸ್ತೆ ಅಪಘಾತ ಸಾವೆಂಬುದು ವರದಿಯಿಂದ ಸ್ಪಷ್ಟಗೊಂಡಿದೆ” ಎಂದವರು ಹೇಳಿದರು.

ಕೆನರಾ ಅರಣ್ಯ ವೃತ್ತದಲ್ಲಿ 2010 ಮತ್ತು 2016ರಲ್ಲಿ ರಸ್ತೆ ಅಪಘಾತದಲ್ಲಿ 11 ಚಿರತೆಗಳು ಸತ್ತಿವೆ. ಇದರಲ್ಲಿ ಮೂರು ಕಳೇಬರೆಹ ಪತ್ತೆಯಾಗಿದ್ದರೆ, ಉಳಿದವುಗಳ ಚರ್ಮ/ಅಂಗಾಂಗ ಜಪ್ತಿ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶ ಮೂಲಕ ಹಾದು ಹೋಗುವ ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಸಾಂದ್ರತೆಯಿಂದ ಕಾಡುಪ್ರಾಣಿಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.  “ಬೇಟೆಗಾರರು ಪ್ರಾಣಿಗಳ ಚರ್ಮ, ಉಗರು ಮತ್ತು ಇತರ ಅಂಗಾಂಗಕ್ಕಾಗಿ ಪ್ರಾಣಿಗಳನ್ನು ಕೊಲ್ಲುತ್ತಾರೆ. ಇದು ಪ್ರಸಕ್ತ ದೊಡ್ಡ ಸಮಸ್ಯೆಯಾಗಿದೆ. ದಟ್ಟಾರಣ್ಯದಲ್ಲಿ ನಡೆಯುತ್ತಿರುವ ಅಕ್ರಮ ದಂಧೆ ಮತ್ತು ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದ ಪ್ರಾಣಿಗಳಿಗೆ ಮಾರಕವಾಗಿದೆ. ಇಲ್ಲಿ ಚಿರತೆಗಳಲ್ಲದೆ, ಸಂಬಾರಗಳೂ ಕೊಲ್ಲಲ್ಪಡುತ್ತಿವೆ. ಇಲ್ಲಿನ ರಸ್ತೆಗಳಲ್ಲಿನ ಕಡಿದಾದ ತಿರುವುಗಳಿಂದಲೂ ಪರಿಸ್ಥಿತಿ ಹದಗೆಡುವಂತಾಗಿದೆ” ಎಂದರು.