ಇಂದು ತೆರೆಗೆ ಕರಿಯ 2, ಕಟಕ

ಕನ್ನಡದಲ್ಲಿ ಈ ವಾರ `ಕರಿಯ 2′ ಹಾಗೂ `ಕಟಕ’ ಸಿನಿಮಾಗಳು ತೆರೆಗೆ ಬರುತ್ತಿವೆ.

  • `ಕರಿಯ 2′ : ದರ್ಶನ್ ಅಭಿನಯದಲ್ಲಿ ಪ್ರೇಮ್ ನಿರ್ದೇಶನದ `ಕರಿಯ’ ಚಿತ್ರ 2003ರಲ್ಲಿ ರಿಲೀಸ್ ಆಗಿತ್ತು. ಈಗ `ಕರಿಯಾ-2′ ಹೆಸರಿನಲ್ಲಿ ಸಿನಿಮಾ ಬರುತ್ತಿದ್ದು, ಚಿತ್ರ ಶುರುವಾದಾಗಿನಿಂದಲೂ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ `ಗಣಪ’ ಚಿತ್ರದಲ್ಲಿ ನಟಿಸಿದ್ದ ಸಂತೋಷ್ ಹೀರೋ. ಮಯೂರಿ ಈ ಸಿನಿಮಾದ ನಾಯಕಿ. `ಕರಿಯ’ ಚಿತ್ರ ನಿರ್ಮಾಪಕ ಆನೇಕಲ್ ಬಾಲರಾಜ್ ಅವರೇ ನಿರ್ಮಿಸುತ್ತಿರುವ `ಕರಿಯಾ 2’ಗೆ ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ.

ಅಂದ ಹಾಗೆ `ಕರಿಯಾ2′ ಚಿತ್ರ ಕೊರಿಯಾ ಭಾಷೆಗೆ ರೀಮೇಕ್, ಹಿಂದಿ ಮತ್ತು ಮರಾಠಿಗೆ ಡಬ್ ಆಗುತ್ತಿದೆ. ತಮಿಳು ಮತ್ತು ತೆಲುಗಿನಲ್ಲೂ ಈ ಸಿನಿಮಾದ ರೀಮೇಕಿಗೂ ಬೇಡಿಕೆ ಇದೆ. ಮಯೂರಿ ಈ ಚಿತ್ರದಲ್ಲಿ ಬುಲೆಟ್ ಏರಿದ್ದು ಸಕತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾಳೆ. ಈಕೆಗೆ ಇದರಲ್ಲಿ ಸ್ವಾಭಿಮಾನೀ ಹುಡುಗಿ ಪಾತ್ರ. ಸಂತೋಷ್ ತನ್ನ ಪ್ರೀತಿಗಾಗಿ ಏನೆಲ್ಲ ಕಸರತ್ತು ಪಡುತ್ತಾನೆ ಎನ್ನುವುದನ್ನು ಪರದೆ ಮೇಲೇ ನೋಡಬೇಕಾಗಿದೆ.

  • `ಕಟಕ’ : ಈ ಚಿತ್ರಕ್ಕೆ `ಉಗ್ರಂ’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಹಾರರ್ ಚಿತ್ರ. ಐದು ವರ್ಷದ ಬಾಲಕಿ ಮೇಲೆ ವಾಮಾಚಾರ ಪ್ರಯೋಗವಾಗಿ ಅದರಿಂದಾಗುವ ಪರಿಣಾಮವೇ ಈ ಚಿತ್ರದ ಕಥೆ.

ವಿಶೇಷವೆಂದರೆ 13 ಭಾಷೆಗಳಲ್ಲಿ ಈ ಚಿತ್ರದ ಟ್ರೇಲರ್ ಬಂದಿತ್ತು. ಸಿನಿಮಾದ ಸೌಂಡಿಂಗಿಗೆ ತುಂಬ ಪ್ರಾಮುಖ್ಯತೆ ನೀಡಿದ್ದು, ಹಾಲಿವುಡ್ ತಂತ್ರಜ್ಞರು ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರಂತೆ. ಈ ಚಿತ್ರದಲ್ಲಿ ಅಶೋಕ್ ಮತ್ತು ಬಾಲ ನಟಿ ಶ್ಲಾಘ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.