ಬಿಜೆಪಿ ಕಬಡ್ಡಿ ಆಯೋಜಿಸಿದ್ದರೆ, ಜೆಡಿಎಸ್ ನಡೆಸಲಿದೆ ಮುದ್ದೆ-ರೋಟಿ ಕೆ ಚರ್ಚಾ

ಮತದಾರರನ್ನು ಸೆಳೆಯಲು ಕಸರತ್ತು

ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಭಾರತೀಯ ಜನತಾ ಪಕ್ಷ ಗ್ರಾಮೀಣ ಹಾಗೂ ಅರೆ ಗ್ರಾಮೀಣ ಪ್ರದೇಶಗಳ ಮತದಾರರನ್ನು ಓಲೈಸಲು  ಕಬಡ್ಡಿ ಆಟದ ಮೊರೆ ಹೊಕ್ಕಿದ್ದರೆ  ಅತ್ತ ಜೆಡಿ(ಎಸ್) ತನ್ನ ಮುದ್ದೆ ರೋಟಿ ಕೆ ಚರ್ಚಾ  ಕಾರ್ಯಕ್ರಮ ನಡೆಸಲು ಸನ್ನದ್ಧವಾಗಿದೆ.

ಬಿಜೆಪಿ ನೇತಾರ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಾಬ್ದಿ ಆಚರಣೆಯ ಅಂಗವಾಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಯುವ ಮೋರ್ಚಾ  ಕಬಡ್ಡಿ ಪಂದ್ಯಾಟ ಆಯೋಜಿಸಿದ್ದು  ಮೇ 14ರಂದು ಆರಂಭವಾದ ಈ ಪಂದ್ಯಾಟದಲ್ಲಿ ಪ್ರತಿ ಕ್ಷೇತ್ರದಿಂದ 20 ತಂಡಗಳು ಭಾಗವಹಿಸುತ್ತಿವೆ. ಸುಮಾರು 50,000 ಯುವಕರು  ಈ ಪಂದ್ಯಾಟಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.  ಭಾಗವಹಿಸುವ ಜನರಿಗೆ ಬಿಜೆಪಿ ಸಿದ್ಧಾಂತಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು. ಪ್ರೊ ಕ¨ಡ್ಡಿ ತಾರೆಯರನ್ನೂ ಆಹ್ವಾನಿಸಿ ಜನರನ್ನು ಸೆಳೆಯಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ ಹೇಳಿದ್ದಾರೆ.

 ಮುದ್ದೆ ರೋಟಿ ಕೆ ಚರ್ಚಾ

 ಅತ್ತ ಜೆಡಿ(ಎಸ್) ತನ್ನ ಅಗ್ರ ನಾಯಕ ಎಚ್ ಡಿ ದೇವೇಗೌಡರ 85ನೇ ಜನ್ಮದಿನಾಚರಣೆಯ ಅಂಗವಾಗಿ ಮೇ 18ರಿಂದ ಆರಂಭಗೊಂಡಂತೆ  ಮುದ್ದೆ-ರೋಟಿ ಕೆ ಚರ್ಚಾ ಕಾರ್ಯಕ್ರಮವನ್ನು ವಿವಿಧೆಡೆ ಆಯೋಜಿಸಿ ಮುದ್ದೆ ರೋಟಿ ಸವಿಯುತ್ತಿರುವಂತೆಯೇ  ಕರ್ನಾಟದ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಸಲಿದೆಯಲ್ಲದೆ ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯ, ಕಳಸ ಬಂಡೂರಿ ಯೋಜನೆಯ  ವಿವಾದ ಪರಿಹರಿಸಲು ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲಿದೆ. ಪ್ರತಿ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು 25ರಿಂದ 30 ಜನರನ್ನು ಒಗ್ಗೂಡಿಸಿ ನಡೆಸಲಾಗುವುದು ಎಂದು ನಾಯಕ ವೈ ಎಸ್ ವಿ ದತ್ತಾ ಹೇಳಿದ್ದಾರೆ.