ವಿದ್ಯಾರ್ಥಿನಿ ಆತ್ಮಹತ್ಯೆ : ಬಿಜೆಪಿ ಯುವ ಮೋರ್ಚಾ ಮುಖಂಡ ಸೆರೆ

ಚಿಕ್ಕಮಗಳೂರು : ಕಾಲೇಜು ವಿದ್ಯಾರ್ಥಿನಿ ಧನ್ಯಶ್ರೀ (20) ಆತ್ಮಹತ್ಯೆ ಮಾಡಿಕೊಳ್ಳಲು ಕಾರಣನಾದ ಆರೋಪದಲ್ಲಿ ಮೂಡಿಗೆರೆ ಪೊಲೀಸರು ಭಾನುವಾರ ಬಿಜೆಪಿ ಯುವ ಮೋರ್ಚಾದ ಮುಖಂಡ ಅನಿಲ್ ಎಂಬಾತನನ್ನು ಬಂಧಿಸಿದ್ದಾರೆ.

ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನಾ ಸ್ಥಳದಲ್ಲಿ ಸಿಕ್ಕಿದ ಪತ್ರವೊಂದರನ್ನಾಧರಿಸಿ ಮೂಡಿಗೆರೆಯ ಅನಿಲನನ್ನು ಬಂಧಿಸಲಾಗಿದೆ. ಸದ್ಯ ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಚಿಕ್ಕಮಗಳೂರು ಪೊಲೀಸ್ ಅಧೀಕ್ಷಕ ಅಣ್ಣಾಮಲೈ ತಿಳಿಸಿದ್ದಾರೆ.

ಯುವತಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ತಾನು ಅನಿಲ್ ಒಳಗೊಂಡಿದ್ದ ಐವರು ಯುವಕರ ಗುಂಪಿಂದ ಮಾನಸಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆಕೆ ಪತ್ರದಲ್ಲಿ ಬರೆದಿದ್ದಳು. ಆಕೆ ಮುಸ್ಲಿಂ ಯುವಕನೊಂದಿಗೆ ಅನ್ಯೋನ್ಯಳಾಗಿದ್ದಾಳೆ ಎಂದು ಗೆಳೆಯರು ಹೇಳಿದ ಬಳಿಕ ಅನಿಲ್ ಆಕೆಯೊಂದಿಗೆ ಜಗಳ ಮಾಡಿದ್ದ.

“ಐವರು ಗೆಳೆಯರು ಶನಿವಾರ ಆಕೆಯ ಮನೆಗೆ ಭೇಟಿ ನೀಡಿದ್ದು, ತಾಯಿ ಮತ್ತು ಆಕೆಯೊಂದಿಗೆ ಜಗಳ ಮಾಡಿದ್ದರು. ಈಕೆ ಮುಸ್ಲಿಂ ಯುವಕನೊಂದಿಗೆ ತಿರುಗಾಡುತ್ತಿದ್ದಾಳೆಂದು ಆರೋಪಿಸಿದ್ದರು. ಮುಂದೆ ಇದು ಲವ್ ಜಿಹಾದಿಗೆ ತಿರುಗಬಹುದು ಎಂದು ಎಚ್ಚರಿಸಿದ್ದರು. ಇದರಿಂದ ತೀವ್ರ ನೊಂದುಕೊಂಡಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಅಣ್ಣಾಮಲೈ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆತ್ಮಹತ್ಯಗೆ ಮುಂಚೆ ಆಕೆ ಬರೆದಿದ್ದ ಪತ್ರ ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅನಿಲನನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಲಾಗಿದೆ.

ತನಿಖಾಧಿಕಾರಿಗಳು ಯುವತಿಯ ಫೋನ್ ವಶಪಡಿಸಿಕೊಂಡಿದ್ದಾರೆ. ಮುಸ್ಲಿಂ ಯುವಕ ಮತ್ತು ಈಕೆಯ ಭಾವಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

LEAVE A REPLY