ಕಾರ್ಕಳ ಎಪಿಎಂಸಿ ಚುನಾವಣೆ ಬಿಜೆಪಿ ಜಯಭೇರಿ

ನಮ್ಮ ಪ್ರತಿನಿಧಿ ವರದಿ
ಕಾರ್ಕಳ : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯ ಒಟ್ಟು 13 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು 8 ಸ್ಥಾನವನ್ನು ಗೆಲ್ಲುವ ಮೂಲಕ ಭರ್ಜರಿ ಸತತ ಮೂರನೇ ಬಾರಿ ಗೆಲುವು ಸಾಧಿಸಿದರೆ ಕಾಂಗ್ರೆಸ್ ಕೇವಲ 3 ಸ್ಥಾನಗಳನ್ನು ಪಡೆದುಕೊಂಡು ಪರಾಭವಗೊಂಡಿದೆ. ವರ್ತಕರ ಕ್ಷೇತ್ರದಿಂದ 2 ಸ್ಥಾನಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತಿಮವಾಗಿ ಒಟ್ಟು ಚುನಾಯಿತ 13 ಸ್ಥಾನಗಳಲ್ಲಿ ಬಿಜೆಪಿ 9 ಹಾಗೂ ಕಾಂಗ್ರೆಸ್ 4 ಸ್ಥಾನಗಳನ್ನು ಪಡೆದುಕೊಂಡಿವೆ.
ಕಾರ್ಕಳ ತಾಲೂಕಿನ ಹೆಬ್ರಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಸಂಜೀವ ನಾಯ್ಕ್, ವರಂಗ ಕ್ಷೇತ್ರದಿಂದ ಮುಟ್ಲುಪಾಡಿ ಸತೀಶ್ ಶೆಟ್ಟಿ, ಅಜೆಕಾರು ಕ್ಷೇತ್ರದಿಂದ ರತ್ನಾಕರ ಅಮೀನ್, ಬೈಲೂರು ಕ್ಷೇತ್ರದಿಂದ ಸುಮನ ಬಿ, ಬಜಗೋಳಿ ಕ್ಷೇತ್ರದಿಂದ ಜಯವರ್ಮ ಜೈನ್, ನಿಟ್ಟೆ ಕ್ಷೇತ್ರದಿಂದ ಆನಂದ ಬಂಡೀಮಠ,ಬೆಳ್ಮಣ್ಣು ಕ್ಷೇತ್ರದಿಂದ ಮೋಹನ್‍ದಾಸ್ ಶೆಟ್ಟಿ ಹಾಗೂ ಮುಂಡ್ಕೂರು ಕ್ಷೇತ್ರದಿಂದ ವಸಂತಿ ಮೂಲ್ಯ ಆಯ್ಕೆಯಾಗಿದ್ದು, ಕುಕ್ಕುಂದೂರು ಕ್ಷೇತ್ರದಿಂದ ಜಯರಾಮ ಆಚಾರಿ, ಕಾರ್ಕಳ ನಗರದಿಂದ ಜೆರಾಲ್ಡ್ ಡಿ’ಸಿಲ್ವ ಹಾಗೂ ನಲ್ಲೂರು ಕ್ಷೇತ್ರದಿಂದ ನಾರಾಯಣ ಪೂಜಾರಿ ಕಾಂಗ್ರೆಸ್ ಬೆಂಬಲಿತರಾಗಿ ಆಯ್ಕೆಯಾಗಿದ್ದಾರೆ.
11 ಸ್ಥಾನಗಳ ಪೈಕಿ ಬೆಳ್ಮಣ್ಣಿನಲ್ಲಿ ಕಾಂಗ್ರೆಸ್ಸಿನಿಂದ ಅವಿನಾಶ್ ಮಲ್ಲಿ ಹಾಗೂ ಬಂಡಾಯ ಅಭ್ಯರ್ಥಿ ಫೆಡ್ರಿಕ್ ನೋವಲ್ ಆರಾನ್ಹಾ ಕಣಕ್ಕಿಳಿದ ಹೊರತಾಗಿಯೂ ಬಿಜೆಪಿಯ ಮೋಹನದಾಸ್ ಶೆಟ್ಟಿ 212 ಮತಗಳಿಂದ ಗೆಲುವು ಸಾಧಿಸಿದ್ದರು. ಉಳಿದ 10 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು.