ಬಿಜೆಪಿ, ವಿಹಿಂಪ ನಂಬಿಕಸ್ಥ ಸಂಘಟನೆಗಳಲ್ಲ : ಸಂತರು

ನವದೆಹಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತಾಗಿ ಇನ್ನಷ್ಟು ಸಮಯ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ತಿನಲ್ಲಿ ವಿಶ್ವಾಸ ಇಟ್ಟುಕೊಳ್ಳುವಂತಿಲ್ಲ ಎಂದು ಹಿಂದೂ ಸಂತರ ಸರ್ವೋಚ್ಛ ಮಂಡಳಿಯಾದ ಅಖಿಲ ಭಾರತೀಯ ಆಕಾರ ಪರಿಷತ್ (ಎಬಿಎಪಿ) ಹೇಳಿದೆ.

ಬಿಜೆಪಿ ಮತ್ತು ವಿಹಿಂಪಕ್ಕೆ ತಮ್ಮ ಬೆಂಬಲ ಸ್ಥಗಿತಗೊಳಿಸಲು ಪರಿಷತ್ ನಿರ್ಧರಿಸಿದೆ. ಈ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗಳ ಹಿನ್ನೆಲೆಯಲ್ಲಿ ಪರಿಷತ್ ನಿನ್ನೆ ಈ ನಿರ್ಧಾರ ತೆಗೆದುಕೊಂಡಿದೆ. ಅಯೋಧ್ಯಾ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ತಾವು ಬದ್ಧವೆಂದು ಪರಿಷತ್ ಹೇಳಿದೆ.

“ಚುನಾವಣೆಯ ಹೊತ್ತಲ್ಲಿ ಮಾತ್ರ ಬಿಜೆಪಿ ಮತ್ತು ವಿಹಿಂಪ ಈ ಸೂಕ್ಷ್ಮ ವಿಷಯ ಮುಂದಿಟ್ಟು ಮತದಾರರನ್ನು ಓಲೈಸುತ್ತವೆ ಮತ್ತು ಸಂತ ಸಮಾಜ ಹಾಗೂ ಹಿಂದೂಗಳ ಭಾವನೆಯೊಂದಿಗೆ ಆಟವಾಡುತ್ತವೆ” ಎಂದು ಪರಿಷತ್ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಟೀಕಿಸಿದರು.

“ಇದಕ್ಕೆ 2014ರ ಲೋಕಸಭೆ ಚುನಾವಣೆ ದೃಷ್ಟಾಂತವಾಗಿದೆ. ಅಧಿಕಾರಕ್ಕೆ ಬಂದ ಬಳಿಕ ಈ ವಿಷಯ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದ ಪ್ರಧಾನಿಯಿಂದ ಈವರೆಗೂ ಈ ಕೆಲಸ ಆಗಿಲ್ಲ” ಎಂದರು.

“ಇನ್ನಷ್ಟು ಸಮಯ ಸಂತರು ಮತ್ತು ಸಾಧುಗಳ ಭಾವನೆಯೊಂದಿಗೆ ಚೆಲ್ಲಾಟ ನಡೆಸುವುದು ಬೇಡ. ಬಿಜೆಪಿ ಮತ್ತು ವಿಹಿಂಪ ವಿಶ್ವಾಸಾರ್ಹ ಸಂಘಟನೆಗಳಾಗಿ ಉಳಿದಿಲ್ಲ” ಎಂದವರು ಹೇಳಿದರು.