ಉಸ್ತುವಾರಿ ವೇಣುಗೋಪಾಲ್ ಪದಚ್ಯುತಿಗೆ ಬಿಜೆಪಿ ಒತ್ತಡ

ಬೆಂಗಳೂರು : ಕೇರಳದಲ್ಲಿ ವಿವಾದಾಸ್ಪದ ಸೋಲಾರ್ ಹಗರಣ ದಲ್ಲಿ ಆರೋಪ ಎದುರಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ನಾಯಕರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಸಿ ವೇಣುಗೋಪಾಲರನ್ನು ರಾಜ್ಯ ಕಾಂಗ್ರೆಸ್ ಬಲವಾಗಿ ಸಮರ್ಥಿಸುತ್ತಿರುವಾಗಲೇ, ಅವರ ಉಚ್ಛಾಟನೆಗೆ ಬಿಜೆಪಿ ಒತ್ತಡ ತಂತ್ರ ಆರಂಭಿಸಿದೆ.

ಸೋಲಾರ್ ಹಗರಣ ತನಿಖೆ ನಡೆಸಿರುವ ಜಸ್ಟಿಸ್ ಜಿ ಶಿವರಾಜನ್ ಸಮಿತಿ ವರದಿಯಲ್ಲಿ ಅಜಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದರೂ ಆಗಿರುವ ವೇಣುಗೋಪಾಲರ ಸಹಿತ ಕಾಂಗ್ರೆಸ್ಸಿನ ಹಲವು ನಾಯಕರ ಹೆಸರು ವ್ಯಕ್ತವಾಗಿದೆ.

“ಈ ಹಗರಣದಲ್ಲಿ ವೇಣುಗೋಪಾಲ್ ಶಾಮೀಲಾಗಿರುವುದು ವರದಿಯಲ್ಲಿ ಉಲ್ಲೇಖಗೊಂಡಿದೆ” ಎಂದಿರುವ ರಾಜ್ಯ ಅಸೆಂಬ್ಲಿ ವಿಪಕ್ಷ ನಾಯಕ ಜಗದೀಶ ಶೆಟ್ಟರ್, “ಲೈಂಗಿಕ ಹಗರಣವೊಂದರಲ್ಲಿ ಶಾಮೀಲಾಗಿರುವವರೊಬ್ಬರ ಉಸ್ತುವಾರಿಯಲ್ಲಿ ಕಾಂಗ್ರೆಸ್ ಮುನ್ನಡೆಯುತ್ತಿದೆಯೇ ? ವೇಣುಗೋಪಾಲಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ. ತಕ್ಷಣ ಹುದ್ದೆಯಿಂದ ಕೆಳಗಿಳಿಯಬೇಕು” ಎಂದು ಆಗ್ರಹಿಸಿದ್ದಾರೆ. “ಹಗರಣಗಳಲ್ಲಿ ಶಾಮೀಲಾಗಿರುವವರ ವಿರುದ್ಧ ಧ್ವನಿ ಎತ್ತುವುದು ವಿಪಕ್ಷವಾಗಿ ನಮ್ಮ ಕರ್ತವ್ಯವಾಗಿದೆ” ಎಂದು ಸುದ್ದಿಗಾರರಲ್ಲಿ ಶೆಟ್ಟರ್ ತಿಳಿಸಿದರು.

ವೇಣುಗೋಪಾಲ್ ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಪಡೆದುಕೊಂಡಿದ್ದರು. “ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜಕೀಯ ಲಾಭಕ್ಕಾಗಿ ವೇಣುಗೋಪಾಲರನ್ನು ಬಿಜೆಪಿ ಗುರಿಯಾಗಿಸಿದೆ” ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ತಿಳಿಸಿದರು.