ಹಳೆಯಂಗಡಿಯಲ್ಲಿ 50,000 ರೂ ಕಾಮಗಾರಿಗೆ ಲಕ್ಷಾಂತರ ರೂ ಖರ್ಚು ಮಾಡಿದ ಬಿಜೆಪಿಗರು !

ಮಂಗಳೂರು : ಹಳೆಯಂಗಡಿ ಪಕ್ಷಿಕೆರೆ ರಸ್ತೆಯ ರೈಲ್ವೇ ಗೇಟು ಹತ್ತಿರದ ಬಳಿಯ ಅಡ್ಡ ರಸ್ತೆಯನ್ನು ಸ್ಥಳೀಯ ತಾಲೂಕು ಪಂಚಾಯತಿ ಸದಸ್ಯರ ಅನುದಾನದಿಂದ ಕೂಗಳತೆಯ ಇಂಟರಲಾಕ್ ಕಾಮಗಾರಿ ನಡೆಸಿದ್ದು, ಇದನ್ನೇ ಸ್ಥಳೀಯ ಬಿಜೆಪಿ ನಾಯಕರು ಸಾಧನೆ ಎಂದು ಬಿಂಬಿಸಿ ಪ್ರಚಾರಕ್ಕೆ ಲಕ್ಷಾಂತರ ರೂ ಖರ್ಚು ಮಾಡಿದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆಯಂಗಡಿ ಕಿನ್ನಿಗೋಳಿ ರಸ್ತೆಯ ಇಂದ್ರನಗರ ರೈಲ್ವೇ ಗೇಟು ಬಳಿ ಸ್ಥಳೀಯ ನಿವಾಸಿ ಹರೀಶ್  ಎಂಬವರ ಮನೆಯ ಅಡ್ಡ ರಸ್ತೆಗೆ ಇಂಟರಲಾಕ್ ಕಾಮಗಾರಿ ನಡೆದಿತ್ತು. ಆದರೆ ಸ್ಥಳೀಯ ತಾಲೂಕು ಪಂಚಾಯತಿ ಸದಸ್ಯರು ಕಾಮಗಾರಿ ಬಗ್ಗೆ ಅತಿಯಾದ ಪ್ರಚಾರ ಬೇಡ ಎಂದು ಬಿಜೆಪಿ ಕಾರ್ಯಕರ್ತರಲ್ಲಿ ವಿನಂತಿಸಿಕೊಂಡಿದ್ದರೂ ಸ್ಥಳೀಯ ಕೆಲಸಿಬೆಟ್ಟು ಮೂಲದ ಬಿಜೆಪಿ ನಾಯಕನೊಬ್ಬ ಬ್ಯಾನರ್, ಬಂಟಿಗ್ಸ್ ಅಳವಡಿಸಿ ಲಕ್ಷಾಂತರ ರೂ ಖರ್ಚು ಮಾಡಿದ್ದಾರೆ. ಇದರಿಂದ ಬೇಸತ್ತ ಸ್ಥಳೀಯ ತಾ ಪಂ ಸದಸ್ಯರು ಬಹಿರಂಗವಾಗಿಯೇ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಹಳೆಯಂಗಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ಸಿನ ಕಾಮಗಾರಿಗಳ ಬಗ್ಗೆ ಅಸೂಯೆಗೊಂಡು ಬಿಜೆಪಿ ಕೂಡ ತಾನೇನು ಕಡಿಮೆ ಇಲ್ಲ ಎಂದು ಪ್ರಚಾರಗಿಟ್ಟಿಸಲು ಹೋಗಿ ತೀವ್ರ ಮುಖಭಂಗಕ್ಕೀಡಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.