ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಯುವಕರಿಗೆ ಟಿಕೆಟು : ಬಿಜೆಪಿ

ಬೆಂಗಳೂರು : ಈ ಹಿಂದೆ ಉತ್ತರ ಪ್ರದೇಶ, ಉತ್ತರಖಂಡ, ದಿಲ್ಲಿ ಮಹಾನನಗರ ಪಾಲಿಕೆ ಚುನಾವಣೆಯಲ್ಲಿ ಪ್ರಯೋಗಿಸಲಾದ ರಣನೀತಿಯಂತೆ ಮುಂಬರುವ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹಳೆ ತಲೆಗಳ ಬದಲಿಗೆ ಹೊಸ ತಲೆಮಾರಿನವರಿಗೆ ಆದ್ಯತೆ ನೀಡಲು ಯೋಚಿಸಿದೆ.

ರಾಜ್ಯದ ಎಲ್ಲೆಲ್ಲಿ ಪಕ್ಷ ಸಂಘಟನೆಯ ಕೊರತೆ ಎದ್ದು ಕಾಣುತ್ತದೆಯೋ ಅಲ್ಲಿ ಉತ್ತಮ ಹಿನ್ನೆಲೆಯುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಆದ್ದರಿಂದ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಬೇಕಿದ್ದರೆ, ಇಂತಹ ಕೆಲವು ರಣನೀತಿ ಪ್ರಯೋಗಿಸಬೇಕಾಗುತ್ತದೆ ಎಂದು ಕಳೆದ ವಾರ ಇಲ್ಲಿ ನಡೆದ ಸಭೆಯೊಂದರಲ್ಲಿ ಪಕ್ಷದ ಅಧ್ಯಕ್ಷ ಅಮಿತ್ ಶಾ ಪಕ್ಷೀಯರಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ರಾಮನಗರ ಮೊದಲಾದ ಕಡೆಯಲ್ಲಿ ಪಕ್ಷ ಸೊರಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಅಗತ್ಯವಿರುವ ಎಲ್ಲ ಕ್ಷೇತ್ರಗಳಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂದವರು ಹೇಳಿದ್ದಾರೆ.

ಒಂದು ಮೂಲದ ಪ್ರಕಾರ ಈ ಬಾರಿ ಉಮೇಶ್ ಕಾರಜೋಳ (ಅರವಿಂದ ಕಾರಜೋಳರ ಪುತ್ರ), ಅರುಣ್ ಸೋಮಣ್ಣ (ವಿ ಸೋಮಣ್ಣರ ಪುತ್ರ), ಹರ್ಷವರ್ಧನ (ಮಾಜಿ ಸಚಿವ ಶ್ರೀನಿವಾಸ ಪ್ರಸಾದರ ಅಳಿಯ) ಮತ್ತು ತೇಜಸ್ವಿ ಸೂರ್ಯ (ಶಾಸಕ ರವಿಸುಬ್ರಹ್ಮಣ್ಯರ ಸಂಬಂಧಿ) ಇವರಿಗೆ ಅಸೆಂಬ್ಲಿ ಟಿಕೆಟು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಬಿಜೆಪಿಯ ಈ ಪ್ರಯೋಗ ಯಶಸ್ವಿಯಾಗಿದ್ದು, ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ ಹೊಸಬರಿಗೆ ಟಿಕೆಟು ನೀಡಿ ಬಿಜೆಪಿ ಜಯಭೇರಿ ಬಾರಿಸಿತ್ತು.

 

LEAVE A REPLY