`ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಬಿಜೆಪಿ ಬೀದಿ ನಾಟಕ ಮಾಡುತ್ತಿದೆ’

ನಮ್ಮ ಪ್ರತಿನಿಧಿ ವರದಿ

ಪುತ್ತೂರು : “ಎತ್ತಿನಹೊಳೆ ಬಿಜೆಪಿಯ ಕೂಸು, ಯೋಜನೆಯ ಕಾಮಗಾರಿ ಅರ್ಧ ಭಾಗ ನಡೆದ ಬಳಿಕ ಸಂಸದ ನಳಿನ್ ಅದಕ್ಕೆ ವಿರೋಧ ವ್ಯಕ್ತಪಡಿಸಿ, ಸ್ವಲ್ಪ ಜನರನ್ನು ಸೇರಿಸಿಕೊಂಡು ಮೆರವಣಿಗೆ ಮಾಡುತ್ತಿದ್ದಾರೆ. ಅತ್ತ ಕೋಲಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಎತ್ತಿನಹೊಳೆ ಯೋಜನೆ ಆಗಲೇಬೇಕು ಎಂದು ಹೇಳುತ್ತಿದ್ದಾರೆ. ಇದು ಎತ್ತಿನಹೊಳೆ ವಿಚಾರದಲ್ಲಿ ಜನರನ್ನು ಮರಳು ಮಾಡುವ ಬೀದಿನಾಟಕದಲ್ಲಿ ಬಿಜೆಪಿಯವರು ತೊಡಗಿದ್ದಾರೆ” ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ವಿಟ್ಲ ಮಹಮ್ಮದ್ ಕುಂಞÂ ಹೇಳಿದರು.

ಅವರು ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಬಿಜೆಪಿಯವರು ಎಂದಿಗೂ ಡಬಲ್ ಗೇಮ್ ಆಟವಾಡುವ ಜನ ಎಂದು ಲೋಕಕ್ಕೆ ಗೊತ್ತಾಗಿದೆ. ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ಮೆರವಣಿಗೆ ಮಾಡುವ ಸಂಸದ ನಳಿನಗೆ ಯಡಿಯೂರಪ್ಪರೇ ಅಧ್ಯಕ್ಷರಲ್ಲವೇ, ಜಿಲ್ಲೆಯ ಬಿಜೆಪಿ ಒಂದು ಹೇಳಿದರೆ ರಾಜ್ಯ ಅಧ್ಯಕ್ಷರು ಇನ್ನೊಂದು ಹೇಳುವ ಮೂಲಕ ಜನರನ್ನು ಮರುಳು ಮಾಡುತ್ತಿದ್ದಾರೆ. ಬಿಜೆಪಿಯ ಡೊಂಕು ಬುದ್ಧಿ ಜನರಿಗೆ ಗೊತ್ತಾಗಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ಜನ ತಿರಸ್ಕರಿಸುತ್ತಾರೆ” ಎಂದರು.