ಛತ್ರಪತಿ ಶಿವಾಜಿ ಹೆಸರತ್ತಿ ಬಿಜೆಪಿ ರಾಜಕೀಯ : ಶಿವಸೇನೆ ಆರೋಪ

ಮುಂಬೈ : “ಶಿವಾಜಿ ಸ್ಮಾರಕದಲ್ಲಿ ಬಿಜೆಪಿ ರಾಜಕೀಯ ನಡೆಸುತ್ತಿದೆ. ಆ ಪಕ್ಷ ತನ್ನ ರಾಜಕೀಯ ಲಾಭಕ್ಕಾಗಿ ಮರಾಠ ದೊರೆ ಛತ್ರಪತಿ ಶಿವಾಜಿಯ ಪರಂಪರೆ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದೆ” ಎಂದು ಶಿವಸೇನೆ ತನ್ನ ಮುಖವಾಣಿ `ಸಾಮ್ನಾ’ದಲ್ಲಿ ಆಪಾದಿಸಿದೆ.

“ಸ್ಮಾರಕವು ಸ್ವಾರ್ಥ ರಾಜಕೀಯಕ್ಕೆ ಬಲಿಯಾಗಬಾರದು. ಮೊನ್ನೆ ಮುಂಬೈಯಲ್ಲಿ ನಡೆದ ಸಮಾರಂಭವೊಂದರಲ್ಲಿ ಶಿವಸೈನಿಕರು `ಜೈ ಭವಾನಿ ಜೈ ಶಿವಾಜಿ’ ಘೋಷಣೆ ಕೂಗಿದಾಗ, ಆಡಳಿತ ಪಕ್ಷದ ಸದಸ್ಯರು ಮೋದಿಗೆ ಜೈಕಾರ ಕೂಗಿದ್ದರು. ಮೋದಿಯಿಂದ ಬಿಜೆಪಿವರೆಗಿನ ಮಹತ್ವ ನಮಗೆಲ್ಲ ಗೊತ್ತಿದೆ. ಅವರೆಲ್ಲ ಮೋದಿ ಟಾನಿಕಿನಿಂದ ಬೆಳೆದವರು. ಇದೆಲ್ಲ ಸತ್ಯವಾಗಿದ್ದರೂ ನೀವು ಯಾರನ್ನೋ ಶಿವಾಜಿ ಮಹಾರಾಜಗೆ ಹೋಲಿಕೆ ಮಾಡುತ್ತೀರಿ” ಎಂದು `ಸಾಮ್ನಾ’ ಸಂಪಾದಕೀಯದಲ್ಲಿ ಲೇವಡಿ ಮಾಡಿದೆ.

ಚುನಾವಣಾ ಲಾಭಕ್ಕಾಗಿ ಶಿವಾಜಿ ಹೆಸರು ಬಳಕೆ ಮಾಡುವಂತಿಲ್ಲ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ ಶಿವಸೇನೆ, “ಮಹಾರಾಷ್ಟ್ರದ ರಾಜಕಾರಣಿಗಳು `ಕೇವಲ’ ರಾಜಕೀಯಕ್ಕೆ ಶಿವಾಜಿ ಹೆಸರು ಬಳಸಿಕೊಳ್ಳುವಂತಿಲ್ಲ” ಎಂದು ಪತ್ರಿಕೆಯಲ್ಲಿ ಎಚ್ಚರಿಸಿದೆÉ.

ಶಿವಾಜಿ ಸ್ಮಾರಕಕ್ಕಾಗಿ ನಡೆದ ಜಲ ಪೂಜನದ ಸಂದರ್ಭದಲ್ಲಿ ಬಿಜೆಪಿ ಪ್ರಧಾನಿ ಉಪಸ್ಥಿತಿಯಲ್ಲಿ ಖಡ್ಗವೊಂದು ಝಳಪಿಸಿತ್ತು. ಅಂದರೆ, ಇದು ಶಿವಾಜಿ ಸ್ಮರಣೆಯ ಕಾರ್ಯಕ್ರಮವೋ ಅಥವಾ ಬಿಜೆಪಿ ಚುನಾವಣಾ ಪ್ರಚಾರವೋ ಎಂಬ ಅನುಮಾನ ಉಂಟಾಗಿದೆ. ಸ್ಥಳದಲ್ಲಿದ್ದ ಕೆಲವರು ಅಸಾಮಾಧಾನ ವ್ಯಕ್ತಪಡಿಸಿ ಈ ಕಾರ್ಯಕ್ರಮ ತ್ಯಜಿಸಿದ್ದರು.