ಪೊಲೀಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಗೋಗಳ್ಳರಿಗೆ ಬೆಂಬಲ ನೀಡಿ ಅಪರಾಧ ಚಟುವಟಿಕೆಗಳಲ್ಲಿ ನಿರತರಾಗಿರುವ ಕಾಂಗ್ರೆಸ್ಸಿನ ಕ್ರಿಮಿನಲ್ ರಾಜಕಾರಣದಲ್ಲಿ ಪೊಲೀಸರು ಭಾಗಿಯಾಗಬೇಡಿ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಎಚ್ಚರಿಸಿದರು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ವಲೇರಿಯನ್ ಕುಟಿನ್ಹೋರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವುದು ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರ ಕ್ರಮ ಖಂಡಿಸಿ ಬಿಜೆಪಿ ವತಿಯಿಂದ ಗುರುವಾರ ಮೂಡುಬಿದಿರೆ ಪೊಲೀಸ್ ಠಾಣೆಯ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

“ಯಾರು ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ ಅಥವಾ ದೇಶದ ಪರವಾಗಿ ಕೆಲಸ ಮಾಡುತ್ತಾರೋ ಅವರನ್ನು ಕಂಡರೆ ಪೊಲೀಸರಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಆಗುವುದಿಲ್ಲ. ತಮ್ಮ ಪಕ್ಷದಲ್ಲಿ ಅಲ್ಪಸಂಖ್ಯಾತರಿದ್ದರೆ ಕಾಳಜಿ ತೋರುವ ಕಾಂಗ್ರೆಸ್ ಪಕ್ಷ, ಪಕ್ಷ ಬಿಟ್ಟ ನಂತರ ಅವರ ಮೇಲೆ ದೌರ್ಜನ್ಯ ಮಾಡುತ್ತದೆ. ಕಾಂಗ್ರೆಸ್ ಮಾತ್ರ ಕ್ರಿಮಿನಲ್ ರಾಜಕರಣ ಮಾಡುತ್ತದೆ ಎಂದು ಹೇಳಿದ ಅವರು, ಕಾಂಗ್ರೆಸ್ ದುರಾಡಳಿತದ ರಾಜಕರಣವನ್ನು ರಾಜ್ಯದ ಜನತೆ ಅರಿತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರಸ್ ಸೋಲುವುದು ಖಚಿತ. ಕಾಂಗ್ರೆಸ್ ಅರಬ್ಬಿ ಸಮುದ್ರ ಸೇರಲಿದೆ ಎಂಬ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಮಾತು ಕೂಡ ಸತ್ಯವಾಗಲಿದೆ” ಎಂದರು.

ಸಂಸದ ನಳಿನ್ ಮಾತನಾಡಿ, “ರಾಜಕರಣ ಮಾಡಲು ರಾಜಕೀಯ ಪಕ್ಷಗಳಿವೆ. ಪೊಲೀಸರು ರಾಜಕೀಯ ಮಾಡಬೇಡಿ, ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಿ. ಕಾಂಗ್ರೆಸ್ ಇನ್ನು ಒಂದು ವರ್ಷ ಅಧಿಕಾರದಲ್ಲಿರಬಹುದು. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ಈಗ ರಾಜಕೀಯ ಮಾಡಿದ ಪೊಲೀಸರು ವಿಜಾಪುರಕ್ಕೆ ಹೋಗಬೇಕಾದೀತು” ಎಂದು ಎಚ್ಚರಿಸಿದರು.

ಇದಕ್ಕೂ ಮೊದಲು ಸ್ವರಾಜ್ಯ ಮೈದಾನದಿಂದ ಪೊಲೀಸ್ ಠಾಣೆವರೆಗೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.