ಬಂಟ್ವಾಳ ಪುರಸಭೆಗೆ ಬಿಜೆಪಿ ಮುತ್ತಿಗೆ

ಬಿಜೆಪಿ ಮುಖಂಡರು ಪುರಸಭಾ ಮುಖ್ಯಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದು

ರಾಜಕೀಯ ತಾರತಮ್ಯ ಆರೋಪ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಇಲ್ಲಿನ ಪುರಸಭಾಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಧೋರಣೆ ತಾಳುತ್ತಿದ್ದು, ಒಂದು ರಾಜಕೀಯ ಪಕ್ಷದ ಪರವಾಗಿ ಏಜೆಂಟರಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಮಂಗಳವಾರ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಳೆದ ತಿಂಗಳು ಸಂಸದ ನಳಿನ್ ನೇತೃತ್ವದಲ್ಲಿ ನಡೆದ ಪಂಚತೀರ್ಥ-ಸಪ್ತ ಕ್ಷೇತ್ರ ಯಾತ್ರೆಯ ಸಂದರ್ಭ ಬಿಜೆಪಿ ವತಿಯಿಂದ ಪ್ರಚಾರಕ್ಕಾಗಿ ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಅಳವಡಿಸಲಾಗಿದ್ದ ಬ್ಯಾನರನ್ನು ಪುರಸಭಾಧಿಕಾರಿಗಳು ಕಾನೂನು-ಕಟ್ಟಳೆ ಎಂದು ಹೇಳಿ ತೆರವುಗೊಳಿಸಿದ್ದರು. ಇದೀಗ ಅದೇ ಜಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವರ ಕಾರ್ಯಕ್ರಮದ ಬಗ್ಗೆ ಪ್ರಚಾರ ಬ್ಯಾನರ್ ಅಳವಡಿಸಿದ್ದಾರೆ. ಈಗ ಎಲ್ಲಿ ಹೋಯಿತು ಕಾನೂನು-ಕಟ್ಟಳೆಗಳು ಎಂದು ಪ್ರಶ್ನಿಸಿದ ಬಿಜೆಪಿ ನಾಯಕರು, ಬ್ಯಾನರ್ ತೆರವುಗೊಳಿಸದ ಹೊರತು ಪುರಸಭಾ ಕಚೇರಿಯಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಸಂದರ್ಭ ಮಧ್ಯಪ್ರವೇಶಿಸಿದ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಅದ್ಯಾವುದೂ ಫಲ ನೀಡಲಿಲ್ಲ. ಕೊನೆಗೂ ಯಾವುದೇ ಹಾದಿ ತೋಚದೆ ಮುಖ್ಯಾಧಿಕಾರಿ ಸುಧಾಕರ್ ಅವರು ಬಿ ಸಿ ರೋಡು ಮುಖ್ಯ ವೃತ್ತದ ಬಳಿ ಇದ್ದ ಅನಧಿಕೃತ ಬ್ಯಾನರ್ ತೆರವುಗೊಳಿಸಿದರು.