`ಕಾರ್ಕಳ ನಾಗರಿಕರನ್ನು ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ಸದಸ್ಯರು’

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : “ಪುರಸಭೆಯ ಬಿಜೆಪಿ ಸದಸ್ಯರು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ವಿರುದ್ಧ ನೀಡಿರುವ ಹೇಳಿಕೆ ಪೂರ್ವಾಗ್ರಹ ಪೀಡಿತವಾಗಿದೆ.  ಇದರಲ್ಲಿ ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿ ಹಾಕಿ ಆ ಮೂಲಕ ಪುರಸಭಾ ವ್ಯಾಪ್ತಿಯ ನಾಗರಿಕರನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಪಿತೂರಿ ಅಡಗಿದೆ” ಎಂದು ನಗರ ಕಾಂಗ್ರೆಸ್ ಅಧ್ಯಕ್ಷ, ಹಾಲಿ ಪುರಸಭಾ ಸದಸ್ಯ ಮತ್ತು ಮಾಜಿ ಪುರಸಭಾ ಅಧ್ಯಕ್ಷ ಸುಬಿತ್ ಕುಮಾರ್ ಎನ್ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, “ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಮರ್ಪಕವಾಗಿ ಆಡಳಿತ ನಡೆಸಿ ಪುರಸಭೆಯನ್ನು ಹಲವು ಪ್ರಶಸ್ತಿಗಳಿಗೆ ಭಾಜನರಾಗುವಂತೆ ಮಾಡಿದ ಮುಖ್ಯಾಧಿಕಾರಿ ರಾಯಪ್ಪರಾಗಲಿ, ಆ ನಂತರ ಬಂದ ಗುರುಪ್ರಸಾದ್ ಆಗ ವರ್ಗಾವಣೆಗೊಂಡು ಹೋಗಲು ಬಿಜೆಪಿಯವರ ಕಿರುಕುಳವೇ ಕಾರಣ. ಆಡಳಿತವನ್ನು ತನ್ನ ಮೂಗಿನ ನೇರಕ್ಕೆ ನಡೆಸುವ ಮತ್ತು ಸ್ವಜನಪಕ್ಷಪಾತದ ನೆಲೆಯಲ್ಲಿ ಜನಪರವಾಗಿ ಆಡಳಿತ ನಡೆಸುವುದು ಕಷ್ಟವೆಂದು ಮನಗಂಡು ಇವರು ವರ್ಗಾವಣೆ ಮಾಡಿಸಿಕೊಂಡು ಹೋಗಿರುವರೇ ಹೊರತು ಪ್ರತಿಪಕ್ಷ ಕಾಂಗ್ರೆಸಿನ ಕಿರುಕುಳದಿಂದಲ್ಲ. ಪುರಸಭೆಯ ಆಡಳಿತ ವ್ಯವಸ್ಥೆ ಅಯೋಮಯವಾಗಿದ್ದು, ಇದು ಜನವಿರೋಧಿ ನೀತಿಯನ್ನೇ ತನ್ನ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಿದೆ. ಇದಕ್ಕೆ ಅಸಮರ್ಪಕ ರೀತಿಯ ಘನತ್ಯಾಜ್ಯ ವಿಲೇವಾರಿಯೆ ಒಂದು ಉದಾಹರಣೆ. ಘನತ್ಯಾಜ್ಯ ವಿಲೇವಾರಿ ಶುಲ್ಕ ನಗರದ ನಾಗರಿಕರಿಗೆ ಹೊರೆಯಾಗುವುದನ್ನು ಮನಗಂಡು ಕಾಂಗ್ರೆಸ್ ಹೋರಾಟ ನಡೆಸಿತ್ತು. ಇದರ ಪರಿಣಾಮವಾಗಿ ಶುಲ್ಕವನ್ನು ಕಡಿಮೆಗೊಳಿಸಲಾಗಿತ್ತು” ಎಂದರು.

“ಅಧ್ಯಕ್ಷರು ತನ್ನ ಪಕ್ಷದ ಆಂತರಿಕ ಕಚ್ಚಾಟದ ಪರಿಣಾಮವಾಗಿ ಪುರಸಭೆಯ ಅಧ್ಯಕ್ಷರು ಎನ್ನುವುದನ್ನು ಮರೆತು ಬಿಜೆಪಿ ಅಧ್ಯಕ್ಷರಂತೆ ವರ್ತಿಸುತ್ತಿರುವುದು ಇಲ್ಲಿನ ನಾಗರಿಕರ ಗಮನಕ್ಕೆ ಬಂದಿದೆ. ನಗರದಲ್ಲಿ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಕಡುಬೇಸಿಗೆ ಸಂದರ್ಭದಲ್ಲಿ ರಾಮಸಮುದ್ರದಿಂದ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಬಹಳ ಹಿಂದೆಯೇ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಆದಾಗ್ಯೂ ಪುರಸಭಾ ಆಡಳಿತ ಸಮಪರ್ಕ ರೀತಿಯಲ್ಲಿ ನಾಗರಿಕರಿಗೆ ನೀರು ಸರಬರಾಜು ವ್ಯವಸ್ಥೆ ಮಾಡಿಲ್ಲ. ನೀರಿಗಾಗಿ ಜನರ ಹಾಹಾಕಾರವನ್ನು ಮನಗಂಡು 10 ದಿನ ಕಾದು ಕಾಂಗ್ರೆಸ್ ಸದಸ್ಯರು ಪುರಸಭೆ ಎದುರು ಪ್ರತಿಭಟನೆ ನಡೆಸಿತ್ತೇ ಹೊರತು, ಹೆಸರಿಗಾಗಿ ಅಲ್ಲ. ಪುರಸಭಾ ಆಡಳಿತ ಕಾಂಗ್ರೆಸ್ ನೀಡಿದ ಸಹಕಾರವನ್ನು ದುರುಪಯೋಗಪಡಿಸಿಕೊಂಡಿದೆಯೇ ಹೊರತು, ಸದುಪಯೋಗ ಪಡಿಸಿಕೊಂಡಿಲ್ಲ. ಇದನ್ನು ಕಾಂಗ್ರೆಸ್ ಸದಸ್ಯರು ದೌರ್ಬಲ್ಯ ಎಂದು ಪರಿಗಣಿಸಬಾರದು” ಎಂದು ತಿಳಿಸಿದ್ದಾರೆ.