ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ್ದ ಬಿಜೆಪಿ ನಾಯಕರು

ಇತಿಹಾಸ ಕೆಲವೊಮ್ಮೆ ಕಠೋರವಾಗಿ ಕಾಣುತ್ತದೆ. ಟ್ವಿಟರ್ ಮತ್ತು ಯು ಟ್ಯೂಬ್ ಯುಗದಲ್ಲಿ ಇದು ಇನ್ನೂ ಹೆಚ್ಚು ಸ್ಪಷ್ಟ. ಈ ಸತ್ಯವನ್ನು ಬಿಜೆಪಿ ನಾಯಕರಿಗಿಂತಲೂ ಚೆನ್ನಾಗಿ ಯಾರೂ ತಿಳಿದಿರಲಾರರು. ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ತೈಲ ಬೆಲೆ ಹೆಚ್ಚಳದ ವಿರುದ್ಧ ಟ್ವಿಟರ್ ಮೂಲಕ ಮತ್ತು ಯುಟ್ಯೂಬ್ ವಿಡಿಯೋ ಮೂಲಕ ಆಕ್ರೋಶದ ಮಾತುಗಳನ್ನಾಡಿದ್ದ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರಿಗೆ ಆ ಕ್ಷಣಗಳು ಭೂತದಂತೆ ಕಾಡುತ್ತಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲಬೆಲೆಗಳು ಗಗನಕ್ಕೇರಿ ಬ್ಯಾರೆಲಿಗೆ 100 ಡಾಲರ್ ಮುಟ್ಟಿದ್ದಾಗ ಯುಪಿಎ ಸರ್ಕಾರ ತೈಲ ಬೆಲೆಗಳನ್ನ ಬ್ಯಾರೆಲಿಗೆ 53 ಡಾಲರುಗಳಂತೆ ಒದಗಿಸುತ್ತಿತ್ತು. ಪ್ರಸ್ತುತ ಸರ್ಕಾರಕ್ಕೆ ಹೋಲಿಸಿದರೆ ಯುಪಿಎ ಸರ್ಕಾರವನ್ನು ಆಕ್ಷೇಪಿಸಲಾಗುವುದಿಲ್ಲ. ಆದರೂ ಬಿಜೆಪಿ ನಾಯಕರು ಪ್ರಧಾನಿ ಮನಮೋಹನ್  ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಎಲ್ಲ ಮಾಧ್ಯಮಗಳನ್ನೂ ಬಳಸಿ ಯುಪಿಎ ಸರ್ಕಾರಕ್ಕೆ ಮಸಿಬಳಿಯಲು ಯತ್ನಿಸಿದ್ದರು.

“ತೈಲಬೆಲೆ ಏರಿಕೆ ಯುಪಿಎ ಸರ್ಕಾರ ವೈಫಲ್ಯಕ್ಕೆ ಸಾಕ್ಷಿ;; ಎಂದು ಮೋದಿ 2012ರ ಮೇ 23ರಂದು ಟ್ವೀಟ್ ಮಾಡಿದ್ದರು. “ಪ್ರಜ್ಞೆಯೇ ಇಲ್ಲದ ಸರ್ಕಾರದಿಂದ ಮತ್ತೊಮ್ಮೆ ತೈಲ ಬೆಲೆ ಏರಿಕೆ ಜನವಿರೋಧಿ ಕ್ರಮ” ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು.

ಪ್ರಸ್ತುತ ಮೋದಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿನಿತ್ಯ ಪರಿಷ್ಕರಣೆಗೆ ಒಳಪಡುತ್ತಿದ್ದು ಸತತವಾಗಿ ಬೆಲೆಗಳು ಏರುತ್ತಲೇ ಇವೆ. ಈ ನೀತಿ ಜನೋಪಯೋಗಿಯಾಗಿದ್ದು, ಸರ್ಕಾರ ತೈಲಬೆಲೆಯನ್ನು ನಿಯಂತ್ರಿಸುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಈ ಬೆಲೆ ಹೆಚ್ಚಳದ ಬಗ್ಗೆ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಜನತೆಯ ಆಕ್ರೋಶವೇ ಎನ್ಡಿಎ ಸರ್ಕಾರಕ್ಕೆ ಮುಳುವಾಗಬಹುದು.