ಎತ್ತಿನಹೊಳೆ ಯೋಜನೆ ವಿರೋಧ : ಬಿಜೆಪಿಗರ ಇಬ್ಬಂದಿತನ ಬಯಲು

ನಳಿನ್ ವಿರುದ್ಧ ಕೋಲಾರ ಬಿಜೆಪಿ ಅಸಮಾಧಾನ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ನಳಿನಕುಮಾರ್ ಕಟೀಲ್ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಕೋಲಾರ ಜಿಲ್ಲೆಯ ಬಿಜೆಪಿ ಮುಖಂಡರು, ರಾಜ್ಯ ಮಟ್ಟದ ನಾಯಕರ ಸಮಕ್ಷಮ ಈ ಬಗ್ಗೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.

ಡಿ 27ರಂದು ಮಂಗಳವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡ, ಮಾಜಿ ಶಾಸಕ ಎಂ ನಾರಾಯಣಸ್ವಾಮಿ ಅವರು ಬಿಜೆಪಿ ಸಂಸದ ನಳಿನಕುಮಾರ್ ಕಟೀಲ್ ಎತ್ತಿನಹೊಳೆ ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಸಂಸದ ನಳಿನ್ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವುದು ಘಟ್ಟದ ಮೇಲಿನ ಬಿಜೆಪಿ ವಲಯದಲ್ಲಿ ಅಸಮಾಧಾನ ಉಂಟುಮಾಡಿದೆ.

ಎತ್ತಿನಹೊಳೆ ಯೋಜನೆಗೆ ವಿರೋಧ ಕುರಿತಂತೆ ಪಕ್ಷದ ರಾಜ್ಯ ಮುಖಂಡರೊಂದಿಗೆ ಚರ್ಚಿಸಿ ಸಂಸದ ನಳಿನ್ ಮನವೊಲಿಸಲಾಗುವುದು ಎಂದು ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ  ವೆಂಕಟಮುನಿಯಪ್ಪ  ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕೋಲಾರ ಪ್ರದೇಶದ ಜನತೆಯ ಮಾಹಿತಿಗಾಗಿ ಪತ್ರಿಕಾ ಹೇಳಿ ನೀಡಿದ್ದಾರೆ.

ಕೂಡಲೇ ಈ ಬಗ್ಗೆ ರಾಜ್ಯ ಮುಖಂಡರಾದ ಯಡ್ಡಿಯೂರಪ್ಪ, ಅನಂತಕುಮಾರ್, ಸದಾನಂದ ಗೌಡರ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೂಡ ಬಿಜೆಪಿ ಮಾಜಿ ಶಾಸಕರು ಕೋಲಾರ ಜನತೆಯನ್ನು ಸಂತೈಸುವ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಪಕ್ಷದಲ್ಲಿ ಇದಕ್ಕೂ ವಿರೋಧ ವ್ಯಕ್ತವಾದರೆ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಪ್ರತಿಭಟನೆ ನಡೆಸಲು ಸಿದ್ದವೆಂಬುದು ನಾರಾಯಣ ಸ್ವಾಮಿ ಹೇಳಿದ್ದಾರೆ. ಎತ್ತಿನ ಹೊಳೆ ಯೋಜನೆ ಕುರಿತು ಸಣ್ಣಪುಟ್ಟ ಗೊಂದಲಗಳಿದ್ದು, ಇವುಗಳನ್ನು ರಾಜ್ಯ ಮುಖಂಡರು ಪರಿಹರಿಸಲಿದ್ದಾರೆ ಎಂದಿರುವ ನಾರಾಯಣ ಸ್ವಾಮಿ ಆ ಸಣ್ಣಪುಟ್ಟ ಗೊಂದಲಗಳು ಯಾವುವು ಎಂದು ವಿವರಿಸಲಿಲ್ಲ.

ಕಳೆದ ಹತ್ತು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಬರಗಾಲ ಆವರಿಸಿರುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂತರ್ಜಲ ಮಟ್ಟ 1500ರಿಂದ 2000 ಅಡಿಗೆ ಹೋಗಿದೆ. ರೈತ ಭೂಗರ್ಭದಲ್ಲಿರುವ ನೀರನ್ನು ತೆಗೆದು ಬೆಳೆಯನ್ನು ಬೆಳೆದರೂ ರೈತರು ಹಾಕಿದ ಬಂಡವಾಳಕ್ಕೆ ಅಸಲು ಸಹ ಬರುತ್ತಿಲ್ಲವೆಂದು ಬಿಜೆಪಿ ಮುಖಂಡರು ಅವಲತ್ತುಕೊಂಡಿದ್ದಾರೆ.