ನೋಟು ನಿಷೇಧ ಬೆಂಬಲಿಸಿದ್ದ ಬಿಜೆಪಿ ನಾಯಕ 20.5 ಲಕ್ಷ ರೂ ಕಾಳಧನ ಸಹಿತ ಬಂಧನ

ಜೆ ವಿ ಆರ್ ಅರುಣ್

ಸೇಲಂ : ಪ್ರಧಾನಮಂತ್ರಿ ಮೋದಿಯ ನೋಟು ನಿಷೇಧ ಕ್ರಮಕ್ಕೆ ಬೆಂಬಲ ಸೂಚಿಸಿ ಸಕ್ರಿಯ ಪ್ರಚಾರ ನಡೆಸಿದ್ದ ತಮಿಳುನಾಡಿನ ಸೇಲಂ ಬಿಜೆಪಿ ಯುವ ಘಟಕ ಕಾರ್ಯದರ್ಶಿ ಜೆ ವಿ ಆರ್ ಅರುಣನನ್ನು ತಮಿಳುನಾಡು ಪೊಲೀಸರು ವಾಹನಗಳ ತಪಾಸಣೆ ವೇಳೆ 20.5 ಲಕ್ಷ ರೂ ಹೊಸ ಕರೆನ್ಸಿಯೊಂದಿಗೆ ಬಂಧಿಸಿದರು.

ಬಿಜೆಪಿ ಯುವ ನಾಯಕನಿಂದ ಜಪ್ತಿ ಮಾಡಲಾದ ನಗದು ಹಣದಲ್ಲಿ 2,000ರ 926 ನೋಟು, 100ರ 1,530 ನೋಟು ಮತ್ತು 50ರ 1,000 ನೋಟು ಒಳಗೊಂಡಿತ್ತು. ಇಷ್ಟೊಂದು ಹಣದ ಮೂಲವೇನೆಂದು ಕೇಳಿದಾಗ ಆತ, ತನ್ನ ಬ್ಯಾಂಕ್ ಮಾಹಿತಿ ತಿರುಚಿ ಹೇಳುತ್ತ ಕಾಲಹರಣ ಮಾಡಿದ್ದಾನೆಯೇ ಹೊರತು ಸಮರ್ಪಕ ಉತ್ತರ ನೀಡಿಲ್ಲ ಎಂದು ಪೊಲೀಸರು ತಿಳಿಸಿದರು.

ಎರಡು ದಿನಗಳ ಹಿಂದೆ ನೋಟು ನಿಷೇಧ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿ ಈತ, “ನನ್ನ ದೇಶದ ಪ್ರಗತಿಗೆ, ಸರದಿಯಲ್ಲಿ ನಿಲ್ಲಲು ನಾನು ಸಿದ್ಧ” ಎಂದು ಫೇಸ್ಬುಕ್ಕಿನಲ್ಲಿ ತೆರೆದಿದ್ದ ಖಾತೆಯಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ.

ಇಷ್ಟೊಂದು ನಗದು ಹಣ ಪ್ರಕರಣದಲ್ಲಿ ಅರುಣನನೊಂದಿಗೆ ಬ್ಯಾಂಕ್ ಅಧಿಕಾರಿಗಳೂ ಶಾಮೀಲಾಗಿದ್ದಾರೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ಈ ಪ್ರಕರಣ ಬಹಿರಂಗಗೊಳ್ಳುತ್ತಲೇ ಕೆಂಡಾಮಂಡಲಗೊಂಡ ರಾಜ್ಯ ಬಿಜೆಪಿ ಘಟಕವು ಈತನ ವಿರುದ್ಧ ಶೋಕಾಸ್ ನೋಟಿಸು ಜಾರಿ ಮಾಡಿರುವುದಲ್ಲದೆ, ಪಕ್ಷದ ಎಲ್ಲ ಅಧಿಕೃತ ಹುದ್ದೆಗಳಿಂದ ಉಚ್ಛಾಟಿಸಿದೆ.