ಬಿಜೆಪಿಯಲ್ಲಿನ ಒಳಜಗಳ ಆತ್ಮಹತ್ಯಾಕಾರಿಯಾಗಿದೆ

ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ `ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಎಂಬ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕೆ ಎಸ್ ಈಶ್ವರಪ್ಪ ನಡುವಿನ ಶೀತಲ ಸಮರ ಇಂದು ಬೀದಿ-ರಂಪವಾಗಿ ಪರಿಣಮಿಸಿ ರಾಜ್ಯದಲ್ಲಿ ಬಿಜೆಪಿ ರಾಜಕಾರಣ ಅಪಹಾಸ್ಯಕ್ಕೆ ಈಡಾಗುತ್ತಿದೆ.
ಇವರಿಬ್ಬರ ವೈಯಕ್ತಿಕ ವಿಚಾರಧಾರೆಗಳು ಏನೇ ಇರಲಿ. ಅವರ ಧೋರಣೆಗಳು ಪಕ್ಷಕ್ಕೆ ಅನುಕೂಲ ಮಾಡಿಕೊಡುವುದರ ಬದಲು ಹೆಚ್ಚಿನ ಹಾನಿಯನ್ನು ತಂದೊಡ್ಡುತಿವೆ. ಉಗ್ರ ದೇಶಪ್ರೇಮಿಗಳ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿಗೆ ಈ ವಿದ್ಯಮಾನ ಮಾರಕವಾಗಿದೆ,. ಆ ಪಕ್ಷದ ರಾಷ್ಟ್ರೀಯ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇವರಿಬ್ಬರ ರಾಜಕಾರಣದಲ್ಲಿ ಯಾವುದೇ ಮೌಲ್ಯಗಳು ಕಾಣುತ್ತಿಲ್ಲ. ರಾಜ್ಯದ ಹಿತ ಕಾಣುತ್ತಿಲ್ಲ. ಬದಲಾಗಿ ಪ್ರತಿಷ್ಠೆ ಇಬ್ಬರಿಗೂ ಮುಖ್ಯವೆನಿಸಿದೆ. ಇವರಿಬ್ಬರ ಆಂತರಿಕ ಕಚ್ಚಾಟ, ಅಶಿಸ್ತು, ಒಬ್ಬರ ಮೇಲೊಬ್ಬರ ಕೆಸರೆರಚಾಟ ಹಾಗೂ ಕತ್ತಿ ಮಸೆಯುವಿಕೆಯಿಂದ ಪಕ್ಷದ ವರ್ಚಸ್ಸು ಕುಂದುತ್ತಿದ್ದು ಕಾರ್ಯಕರ್ತರುಗಳೂ, ಅಭಿಮಾನಿಗಳೂ ವೇದನೆ ಅನುಭವಿಸುವಂತಾಗಿದೆ.
ಹಾಲಿ ಕಾಂಗ್ರೆಸ್ ಸರಕಾರದ ಆಡಳಿತ ರಾಜ್ಯದ ಜನತೆಗೆ ಸಂತೋಷವನ್ನೇನೂ ಉಂಟು ಮಾಡಿಲ್ಲ. ಬದಲಿಗೆ ಜನತೆ ಭ್ರಮನಿರಸನಗೊಂಡಿದ್ದು, ಸದರಿ ಅವಕಾಶವನ್ನು ಮುಂದಿನ ಚುನಾವಣೆಯಲ್ಲಿ `ಕ್ಯಾಶ್’ ಮಾಡಿಕೊಳ್ಳುವ ಅವಕಾಶದಿಂದ ಬಿಜೆಪಿ ವಂಚಿತವಾಗುವ ಎಲ್ಲ ಸೂಚನೆಗಳೂ ಗೋಚರಿಸುತ್ತಿವೆ. ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಯಿಂದ ಬಲಗೊಂಡಿರುವ ಪಕ್ಷವನ್ನು ಇನ್ನಷ್ಟು ಬಲಗೊಳಿಸಬೇಕಾಗಿರುವ ಈ ಸಂದರ್ಭದಲ್ಲಿ ನಾಯಕರಿಬ್ಬರ ಶೀತಲಸಮರ ರಾಜ್ಯ ಮಟ್ಟದಲ್ಲಿ ಪಕ್ಷವನ್ನು ಎತ್ತ ಕೊಂಡೊಯ್ಯುವುದೋ ಎಂಬ ಆತಂಕ ಬಿಜೆಪಿ ಮುಖಂಡರನ್ನು ಕಾಡುತ್ತಿದೆ.
ಪಕ್ಷದ ನಾಯಕರಿಬ್ಬರ ಪರಸ್ಪರ ಮುನಿಸು, ಕಿತ್ತಾಟಗಳನ್ನು ಗಮನಿಸುತ್ತಿರುವ ರಾಜ್ಯದ ಮತದಾರರು ಮುಂದಿನ ಚುನಾವಣೆಯಲ್ಲಿ ಇವರಿಬ್ಬರಿಗೂ ಹೇಗೆ ಬುದ್ಧಿ ಕಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ

  • ಸಿದ್ದರಾಜು
    ಕಿನ್ನಿಮುಲ್ಕಿ-ಉಡುಪಿ