2019ರತ್ತ ಬಿಜೆಪಿ ಚಿತ್ತ `ದಲಿತರೆಡೆಗೆ ಪಯಣ’

ಉತ್ತರ ಪ್ರದೇಶದ ಗೆಲುವಿನ ಹುಮ್ಮಸ್ಸಿನಲ್ಲಿ 2019ರಲ್ಲಿ ಮೋದಿ ಪುನಃ ಅಧಿಕಾರಕ್ಕೆ ಬರುವಂತೆ ಮಾಡಲು ಬಿಜೆಪಿ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.

ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ವಿಜಯದೊಂದಿಗೆ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ 2019ರ ಲೋಕಸಭಾ ಚುನಾವಣೆಗಳತ್ತ ದೃಷ್ಟಿ ನೆಟ್ಟಿದ್ದು 2014ರ ಚುನಾವಣೆಗಳಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಲು ಯೋಚಿಸುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ತನ್ನ ಹಿರಿಯ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು ಅಂಬೇಡ್ಕರ್ ಚಿಂತನೆಗಳನ್ನು ಉದಾರವಾಗಿ ಬಳಸಿಕೊಳ್ಳುವ ಮೂಲಕ ದಲಿತ ಸಮುದಾಯವನ್ನು ಆಕರ್ಷಿಸಲು ನಿರ್ಧರಿಸಿದೆ.

ಉತ್ತರ ಪ್ರದೇಶದ ಗೆಲುವಿನ ಹುಮ್ಮಸ್ಸಿನಲ್ಲಿ 2019ರಲ್ಲಿ ಮೋದಿ ಪುನಃ ಅಧಿಕಾರಕ್ಕೆ ಬರುವಂತೆ ಮಾಡಲು ಬಿಜೆಪಿ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಪಕ್ಷದ ಸಂಸ್ಥಾಪನಾ ದಿನವಾದ ಏಪ್ರಿಲ್ 6ರಿಂದ ಅಂಬೇಡ್ಕರ್ ಜನ್ಮದಿನವಾದ ಏಪ್ರಿಲ್ 14ರವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು `ಗರೀಬ್ ಉತ್ಥಾನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಆಗ್ರಾ ನಗರವನ್ನು ಭಾರತದ ದಲಿತರ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಅಂಬೇಡ್ಕರ್ ಜಯಂತಿಯಂದು ಲಕ್ಷಾಂತರ ಬೌದ್ಧರು, ದಲಿತರು ಸೇರುತ್ತಾರೆ. ಸಾಮೂಹಿಕ ವಿವಾಹವನ್ನೂ ಏರ್ಪಡಿಸಲಾಗುತ್ತದೆ. ಬಿಜೆಪಿ ಈ ದಲಿತ ಸಮುದಾಯವನ್ನು ಆಕರ್ಷಿಸಲು ರಣತಂತ್ರ ಹೂಡಿದರೂ ಮೇಲ್ಜಾತಿಯ ಸಮುದಾಯಗಳ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸುವುದಿಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. 2019ರ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟ ಆದೇಶ ನೀಡಲಾಗಿದ್ದು ಸಂಸದರು ಮತ್ತು ಶಾಸಕರು ಕಾರ್ಯಕರ್ತರೊಡನೆ ನಿರಂತರ ಸಂಪರ್ಕದಲ್ಲಿರಲು ಆದೇಶಿಸಲಾಗಿದೆ.

ಸಂಸದರಿಗೆ ನಿರ್ದಿಷ್ಟ ಪ್ರದೇಶಗಳನ್ನು ನಿಗದಿಪಡಿಸಲಾಗಿದ್ದು ಈ ಪ್ರದೇಶಗಳಲ್ಲಿ ಕೆಲ ಕಾಲ ತಂಗುವುದೇ ಅಲ್ಲದೆ ಅಲ್ಲಿನ ದಲಿತರು ಮತ್ತು ಬಡಜನತೆಯೊಡನೆ ಸಂಪರ್ಕ ಸಾಧಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಂತೆ ಪಕ್ಷ ಆದೇಶಿಸಿದೆ.

ಈ ಕಾರ್ಯಾಚರಣೆಯ ಮೂಲಕ ಬಿಜೆಪಿ ಪಕ್ಷದ ಜಾತಿ ಸಮೀಕರಣವನ್ನು ಮರುಪರಿಶೀಲನೆ ಮಾಡುತ್ತಿದೆ. ಭೀಂ ಆಪ್ ಮೂಲಕ ದಲಿತ ಸಮುದಾಯವನ್ನು ಆಕರ್ಷಿಸಲು ಪಕ್ಷ ಯತ್ನಿಸುತ್ತಿದ್ದು, ಬಹುಜನ ಸಮಾಜ ಪಕ್ಷ ಅಂಬೇಡ್ಕರರನ್ನು ತಮ್ಮ ಖಾಸಗಿ ಆಸ್ತಿಯಂತೆ ಪರಿಗಣಿಸುತ್ತಿದೆ, ಆದರೆ ಬಿಜೆಪಿ ಅಂಬೇಡ್ಕರರ ತತ್ವಗಳನ್ನು ಅಕ್ಷರಶಃ ಪಾಲಿಸುತ್ತದೆ ಎಂಬ ಸಂದೇಶವನ್ನು ರವಾನಿಸುತ್ತಿದೆ.

2017ರ ಚುನಾವಣೆಗಳಲ್ಲಿ ಕಂಡ ಲಾಭವನ್ನು ಬಿಜೆಪಿ 2019ರಲ್ಲಿ ಹೇಗೆ ಬಳಸಿಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ. ಈಗಾಗಲೇ ಕಾಂಗ್ರೆಸ್ ಉತ್ತರಪ್ರದೇಶದ ಹೀನಾಯ ಸೋಲಿನ ನಂತರ ಆತ್ಮವಿಮರ್ಶೆಯಲ್ಲಿ ತೊಡಗಿದ್ದು 2019ರ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಮೋದಿ ಸುನಾಮಿ ಅಲೆಗಳಿಂದ ಸುರಕ್ಷಿತವಾಗಿ ಹೊರಬಂದು ಪಕ್ಷವನ್ನು ಪುನಶ್ಚೇತನಗೊಳಿಸಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.

ಮತ್ತೊಂದೆಡೆ ಸಮಾಜವಾದಿ ಪಕ್ಷವೂ ಸಹ  ತನ್ನ ಸರ್ವಸದಸ್ಯ ಸಭೆಯನ್ನು ಆಯೋಜಿಸಿದ್ದು  ಈ ಭಾನುವಾರ ನಡೆಯುವ ಸಮಾವೇಶದಲ್ಲಿ ಸೋಲು ಗೆಲುವಿನ ಪರಾಮರ್ಶೆ ನಡೆಸಲಿದೆ. ಆದರೆ ಬಿಜೆಪಿಗೆ ಹೋಲಿಸಿದರೆ ಇತರ ಪಕ್ಷಗಳ ಕಾರ್ಯವೈಖರಿ ಮತ್ತು ಚಟುವಟಿಕೆಗಳು  ಮಂದಗತಿಯಲ್ಲಿ ಸಾಗುತ್ತಿರುವುದು ಸ್ಪಷ್ಟವಾಗುತ್ತದೆ. ಮೋದಿ ರಥದ ಪಯಣವನ್ನು ತಡೆಗಟ್ಟಲು ಕಾಂಗ್ರೆಸ್ ಮತ್ತಿತರ ಪಕ್ಷಗಳು ಇನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. (ಕೃಪೆ : ಇಂಡಿಯಾ ಟುಡೇ)