ಅಂಬೇಡ್ಕರ್ ಆಲಂಗಿಸಿ ದಲಿತರನ್ನು ಸೆಳೆಯಲು ಮತ್ತೆ ಸಿದ್ಧವಾದ ಬಿಜೆಪಿ

ನವದೆಹಲಿ : ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೆಲುವಿಗಾಗಿ ತಮ್ಮನ್ನು ಹಾಗೂ ಪಕ್ಷಾಧ್ಯಕ್ಷ ಅಮಿತ್ ಶಾ ಅವರನ್ನು ಸನ್ಮಾನಿಸಿದ ಬಿಜೆಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೆಚ್ಚೆಚ್ಚು ದಲಿತರನ್ನು ತಲುಪುವ ಉದ್ದೇಶದಿಂದ ಹಲವು ಯೋಜನೆಗಳನ್ನು ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಮುಂಬರುವ 125ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಘೋಷಿಸಿದರು.
“ನ ಬೈಟೂಂಗ, ನ ಬೈಟ್ನೇ ದೂಂಗ (ನಾನು ವಿರಮಿಸುವುದಿಲ್ಲ, ಇತರರಿಗೂ ವಿರಮಿಸಲು ಬಿಡುವುದಿಲ್ಲ)” ಎಂದು ಹೇಳಿದ ಮೋದಿ, ಅಂಬೇಡ್ಕರ್ ಜಯಂತಿಯಂಗವಾಗಿ ಎಪ್ರಿಲ್ 8ರಿಂದ 14ರತನಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಹಾಗೂ ಸರಕಾರ ಡಿಜಿಟಲ್ ಇಕಾನಮಿ ಉತ್ತೇಜಿಸುವ ಸಲುವಾಗಿ ಅಭಿವೃದ್ಧಿ ಪಡಿಸಿದ ಭೀಮ್ ಆ್ಯಪ್ ಜನಪ್ರಿಯಗೊಳಿಸುವಂತೆ ಸಂಸದರಿಗೆ ನಿರ್ದೇಶನ ನೀಡಿದರು.
ಅಂಬೇಡ್ಕರ್ ಅವರ 125ನೇ ಜಯಂತಿಯ ಸ್ಮರಣೆಗಾಗಿ ಎಪ್ರಿಲ್ 14ರಂದು ಹೊಸ ನಾಣ್ಯವೊಂದನ್ನೂ ಬಿಡುಗಡೆಗೊಳಿಸುವುದಾಗಿಯೂ ಅವರು ಹೇಳಿದರು. ಮೋದಿ ಸರಕಾರ ಮತ್ತು ಸಂಘ ಪರಿವಾರ ಅಂಬೇಡ್ಕರ್ ಅವರನ್ನು ಆಲಂಗಿಸುವ ಸಲುವಾಗಿ ಆಯೋಜಿಸಿರುವ ಹಲವು ಕಾರ್ಯಕ್ರಮಗಳ ಭಾಗ ಇದಾಗಿದ್ದು, ಅಂಬೇಡ್ಕರ್ ಅವರನ್ನು ತಮ್ಮ ಆದರ್ಶವೆಂದು ನಂಬಿರುವ ಬಿಎಸ್ಪಿ ಚುನಾವಣೆಯಲ್ಲಿ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಅಂಬೇಡ್ಕರ್ ಅವರನ್ನು ಇನ್ನಷ್ಟು ಹತ್ತಿರಕ್ಕೆ ಎಳೆದುಕೊಳ್ಳಲು ಯತ್ನಿಸುತ್ತಿರುವುದು ಸ್ಪಷ್ಟ.
ಭೀಮ್ ಆ್ಯಪ್ ಜನಪ್ರಿಯಗೊಳಿಸಲು ಪಕ್ಷದ ಚುನಾಯಿತ ಪ್ರತಿನಿಧಿಗಳಿಗೆ ಪ್ರಧಾನಿ ನೀಡಿದ ನಿರ್ದೇಶನ ಕೂಡ ಇಲ್ಲಿ ಮಹತ್ವದ್ದಾಗಿದ್ದು, ಉತ್ತರ ಪ್ರದೇಶದಲ್ಲಿನ ಬಿಜೆಪಿ ಗೆಲುವಿಗೆ ಜನರು ಅಮಾನ್ಯೀಕರಣವನ್ನು ಬೆಂಬಲಿಸಿರುವುದೇ ಕಾರಣವೆಂದು ಬಿಜೆಪಿ ಅಂದುಕೊಳ್ಳುತ್ತಿದೆ.
ಸರಕಾರದ ಜನಕಲ್ಯಾಣ ಯೋಜನೆಗಳ ರಾಯಭಾರಿಗಳೆಂದು ಯುವಜನತೆಯನ್ನು ಪರಿಗಣಿಸಬೇಕೆಂದು ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಸಂಸದರಿಗೆ ತಿಳಿಸಿದರಲ್ಲದೆ ಕುಟುಂಬ ಆಳ್ವಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧದ ಮತ ಇದಾಗಿದೆಯೆಂದು ವಿವರಿಸಿದರು.
ಕಲ್ಯಾಣ ಕಾರ್ಯಕ್ರಮಗಳ ಹೊರತಾಗಿ ಸರಕಾರದ ನೋಟು ಅಮಾನ್ಯೀಕರಣದ ದಿಟ್ಟ ನಿರ್ಧಾರವೇ ಅದಕ್ಕೆ ಸಾಕಷ್ಟು ಜನಬೆಂಬಲ ದೊರಕಿಸಿಕೊಟ್ಟಿತು ಎಂದರು ಶಾ.