ಅಸಂತುಷ್ಟ ನಾಯಕರ ಪತ್ರದ ಬಗ್ಗೆ ಬಿಜೆಪಿಯಲ್ಲಿ ಗೊಂದಲ

ಬೆಂಗಳೂರು : ಕೆಲವು ಶಾಸಕರೂ ಒಳಗೊಂಡಂತೆ ಸುಮಾರು 24 ಮಂದಿ ಎರಡನೇ ಹಂತದ ಬಿಜೆಪಿ ನಾಯಕರು ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡ್ಡಿಯೂರಪ್ಪ ಕಾರ್ಯವೈಖರಿಯನ್ನು ಹಾಗೂ ಅವರು ತೆಗೆದುಕೊಳ್ಳುತ್ತಿರುವ `ಏಕಪಕ್ಷೀಯ’ ನಿರ್ಧಾರಗಳನ್ನು ಟೀಕಿಸಿ ಬರೆದಿದ್ದಾರೆನ್ನಲಾದ ಪತ್ರ ಸಾಕಷ್ಟು ಸುದ್ದಿಗೆ ಗ್ರಾಸವಾಗಿರುವಂತೆಯೆ ಶನಿವಾರ ಈ ಬಗ್ಗೆ ಮಾಧ್ಯಮಗಳಿಗೆ ವಾಟ್ಸ್ಯಾಪ್ ಸಂದೇಶವೊದನ್ನು ಕಳುಹಿಸಿದ ವಕ್ತಾರ, “ಪತ್ರಕ್ಕೆ ಸಹಿ ಹಾಕಿದ್ದಾರೆಂದು ಅದರಲ್ಲಿ ಉಲ್ಲೇಖಿಸಲಾದ ಹತ್ತು ನಾಯಕರು ತಮಗೆ ಆ ಪತ್ರದಲ್ಲಿ ಏನು ಬರೆದಿದೆಯೆಂದು ತಿಳಿದಿಲ್ಲ, ತಮಗೂ ಪತ್ರಕ್ಕೂ ಏನೂ ಸಂಬಂಧವಿಲ್ಲವೆಂದು ಹೇಳಿದ್ದಾರೆಂದು” ತಿಳಿಸಿದ್ದಾರೆ.
ಅತ್ತ ಯಡ್ಡಿಯೂರಪ್ಪ ಆಪ್ತ ಮತ್ತು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳೀ ಪತ್ರಿಕಾ ಪ್ರಕಟಣೆಯೊಂದನ್ನು ನೀಡಿ ಪಕ್ಷದ ಕಚೇರಿಗೆ ಯಾವ ಪತ್ರವೂ ತಲುಪಿಲ್ಲ ಎಂದಿದ್ದಾರೆ.
“24 ಮಂದಿ ನಾಯಕರಲ್ಲಿ ವಿಶ್ವೇಶ್ವರ ಹೆಗ್ಡೆ ಕಾಗೇರಿ, ರಘುನಾಥ್ ಮಲ್ಕಾಪುರೆ, ನಾರಾಯಣಸ್ವಾಮಿ ಭಂಡ್ಗೆ, ಎಂ ಎಸ್ ಸೋಮಲಿಂಗಪ್ಪ, ಚಂದ್ರ ನಾಯ್ಕ್, ಅಶ್ವಥನಾರಾಯಣ್, ಶ್ರೀಕಾಂತ್ ಕುಲಕರ್ಣಿ ಮತ್ತು ಮಹೇಶ್ ತೆಂಗಿನಕಾಯಿ ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ” ಎಂದು ಅವರು ತಿಳಿಸಿದ್ದಾರೆ.
ತರುವಾಯ ತಾವು ಬಿಜೆಪಿ ಕಚೇರಿಗೆ ಜನವರಿ 12ರಂದು ಪತ್ರ ಸಲ್ಲಿಸಿದ್ದಾಗಿ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೇಳಿಕೊಂಡಿದ್ದಾರೆ. “24 ಬಿಜೆಪಿ ನಾಯಕರು ಸಹಿ ಹಾಕಿದ ಪತ್ರವನ್ನು ಅಧ್ಯಕ್ಷರ ಕಚೇರಿಗೆ ಜನವರಿ 12ರಂದು ಸಲ್ಲಿಸಲಾಗಿತ್ತು. ಆ ಪತ್ರದಲ್ಲೇನಿದೆ ಎಂದು ನನಗೆ ಬಹಿರಂಗ ಪಡಿಸಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.