ಪಿ ಎಫ್ ಐ ನಿಷೇಧಕ್ಕೆ ಆಗ್ರಹ ಜಿಲ್ಲೆಯಲ್ಲಿ ಗೂಂಡಾಗಿರಿಗೆ ಸರಕಾರ ಹೊಣೆ : ಬಿಜೆಪಿ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಅಹಿತಕರ ವಿದ್ಯಮಾನಗಳಿಗೆ ಗೂಂಡಾಗಿರಿ ಕಾರಣವಾಗಿದೆ. ಇಂತಹ ಗೂಂಡಾಗಿರಿಯನ್ನು ನಾವು ಬಿಹಾರದಲ್ಲಿ ನೋಡಿದ್ದೆವು. ಆದರೆ ಅವಿಭಜಿತ ಜಿಲ್ಲೆಗಳಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳಿಗೆ ರಾಜ್ಯ ಸರಕಾರವೇ ನೇರ ಹೊಣೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ದೂರಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೂನ್ 2015ರ ಬಳಿಕ ಸರಿಸುಮಾರು 40 ಪ್ರಕರಣಗಳು ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ನಡೆದಿವೆ. ಕೆ ಎಫ್ ಡಿ, ಪಿ ಎಫ್ ಐ ಮುಂತಾದ ಕೋಮುವಾದಿ ಸಂಘಟನೆಗಳು ನಡೆಸುತ್ತಿರುವ ಇಂತಹ ಗೂಂಡಾಗಿರಿಯನ್ನು ರಾಜ್ಯ ಸರಕಾರವೇ ಪ್ರೋತ್ಸಾಹಿಸುವಂತಿದೆ ಎಂದು ಅವರು ಹೇಳಿದರು. ಸಮಾಜದ್ರೋಹಿ ಚಟುವಟಿಕೆಗಳಲ್ಲಿ ನಿರತವಾಗಿರುವ ಪಿ ಎಫ್ ಐ ಸಂಘಟನೆಯನ್ನು ನಿಷೇಧಿಸಲು ಅವರು ಒತ್ತಾಯಿಸಿದರು. ಪಿ ಎಫ್ ಐ ಸಂಘಟನೆ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಕಲ್ಲೆಸೆದ ಪರಿಣಾಮ ಲಾಠಿ ಚಾರ್ಜ್ ನಡೆಸಲಾಗಿದೆ. ಪೊಲೀಸರಿಗೆ ಗಾಯವಾಗಿದೆ. ಇನ್ನೊಂದೆಡೆ ಎಎಸ್‍ಐ ಐತಪ್ಪ ಅವರ ಮೇಲೆ ಲೇಡಿಹಿಲ್ ಬಳಿ ದುಷ್ಕರ್ಮಿಗಳು ಕೊಲೆಯತ್ನ ನಡೆಸಿದ್ದಾರೆ. ಈ ಎರಡೂ ಪ್ರಕರಣಗಳನ್ನು ಖಂಡಿಸುವುದಾಗಿ ಹೇಳಿದರು.