ಕಳಂಕಿತ ಗಣಿ ಧಣಿಗಳಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿರುವ ಬಿಜೆಪಿ, ಕಾಂಗ್ರೆಸ್

ಕರಾವಳಿ ಅಲೆ ವರದಿ

ಬೆಂಗಳೂರು : ತಮ್ಮ ರಾಜಕೀಯ ಜೀವನವನ್ನು ಮುಂದಿನ ವಿಧಾನಸಭಾ ಚುನಾವಣೆಗಿಂತ ಮುಂಚೆಯೇ ಪುನರುಜ್ಜೀವಗೊಳಿಸಲು ಕಾತುರರಾಗಿರುವ ಬಳ್ಳಾರಿಯ ಹಲವಾರು ಕಳಂಕಿತ ಗಣಿ ಉದ್ಯಮಿಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ತಮ್ಮ ಬಾಗಿಲುಗಳನ್ನು ತೆರೆದು ಕಾದು ಕುಳಿತಿವೆ.

ಕಳೆದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಕೈಗೊಂಡು ತಾನು ರಾಜ್ಯದ ಗಣಿ ಸಂಪತ್ತಿನ ರಕ್ಷಕನೆಂದು ಕರೆಸಿಕೊಂಡಿದ್ದ ಕಾಂಗ್ರೆಸ್ ಈಗಾಗಲೇ ಕಳಂಕಿತ ಹೊಸಪೇಟೆ ಶಾಸಕ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ಶಾಸಕ ಬಿ ನಾಗೇಂದ್ರ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಇಬ್ಬರೂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದವರು.

ಹೊಸಪೇಟೆಯಿಂದ ಕಳೆದ ಶನಿವಾರ ಆರಂಭಗೊಂಡ ಜನಾಶೀರ್ವಾದ ಯಾತ್ರೆಯಲ್ಲಿ ಅವರಿಬ್ಬರೂ ಪ್ರಮುಖ ಆಕರ್ಷಣೆಯಾಗಿದ್ದರು. ಈ ಸಂದರ್ಭದ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಬಳ್ಳಾರಿಯ ಗಣಿ ಲಾಬಿಯನ್ನು ಅವರ ರಿಪಬ್ಲಿಕ್ ಆಫ್ ಬಳ್ಳಾರಿಯಲ್ಲಿ ಸದೆಬಡಿದಿದ್ದಾಗಿ ಎದೆ ತಟ್ಟಿ ಹೇಳಿಕೊಂಡಿದ್ದರು.

ಬಳ್ಳಾರಿಯ ಪ್ರಭಾವಿ ನಾಯಕ ಶ್ರೀರಾಮುಲು ಅವರ ಸೋದರಳಿಯ ಕಂಪ್ಲಿ ಶಾಸಕ ಎಚ್ ಟಿ ಸುರೇಶ್ ಬಾಬು ಅವರ ಮೇಲೆಯೂ ಕಾಂಗ್ರೆಸ್ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಈ ನಡೆ ಬಳ್ಳಾರಿಯಲ್ಲಿ ತಮ್ಮ ಜೀವ ಪಣವಾಗಿಟ್ಟು ಗಣಿ ಲಾಬಿ ವಿರುದ್ಧ ಹೋರಾಡಿದ್ದ ಪಕ್ಷದ ಹಲವರಿಗೆ ಇರಿಸುಮುರಿಸು ಉಂಟು ಮಾಡಿದೆ.

ಅತ್ತ ಬಿಜೆಪಿ ಕೂಡ ರೆಡ್ಡಿ ಸೋದರರತ್ತವೇ ತನ್ನ ಚಿತ್ತ ನೆಟ್ಟಿದೆ. ಜಿ ಸೋಮಶೇಖರ ರೆಡ್ಡಿ ಹಾಗೂ ಜಿ ಕರುಣಾಕರ ರೆಡ್ಡಿ ಇಬ್ಬರೂ ಬಿಜೆಪಿಯಿಂದ ಕ್ರಮವಾಗಿ ಬಳ್ಳಾರಿ ನಗರ ಹಾಗೂ ಹರಪನಹಳ್ಳಿ ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಒಂದು ವೇಳೆ ಕಂಫ್ಲಿ ಶಾಸಕ ಸುರೇಶ್ ಬಾಬು ಬಿಜೆಪಿಯಲ್ಲಿಯೇ ಇರಲು ನಿರ್ಧರಿಸಿದರೆ ಅವರು ಕೂಡ ಬಿಜೆಪಿ ಅಭ್ಯರ್ಥಿಯಾಗುವ ನಿರೀಕ್ಷೆಯಿದೆ. ಅವರೀಗ ಶ್ರೀರಾಮುಲು ಕಳೆದ ಚುನಾವಣೆ ಸಂದರ್ಭ ರಚಿಸಿದ್ದ ಬಿಎಸ್ಸಾರ್ ಕಾಂಗ್ರೆಸ್ ಶಾಸಕರಾಗಿದ್ದಾರೆ.

ಗಣಿ ಧಣಿ ಜನಾರ್ದನ ರೆಡ್ಡಿಯನ್ನು ಮತ್ತೆ ಪಕ್ಷಕ್ಕೆ ಕರೆತರುವ ಗಂಭೀರ ಯತ್ನವನ್ನೂ ಬಿಜೆಪಿ ಮಾಡುತ್ತಿದೆಯೆನ್ನಲಾಗಿದೆ. ಸದ್ಯ ಜಾಮೀನಿನ ಮೇಲಿರುವ ರೆಡ್ಡಿಗೆ ಬಳ್ಳಾರಿಗೆ ಪ್ರವೇಶಿಸಲು ಅನುಮತಿಯಿಲ್ಲ.

ಇದೀಗ ಆನಂದ್ ಸಿಂಗ್ ಮತ್ತು ನಾಗೇಂದ್ರ ಕಾಂಗ್ರೆಸ್ ಸೇರಿದ್ದಾರೆಂಬ ನೆಪದಲ್ಲಿಯೇ ಬಿಜೆಪಿ ರೆಡ್ಡಿ ಸಹೋದರರನ್ನು ತನ್ನ ಪಕ್ಕಕ್ಕೆ ಸೆಳೆಯಲು ಯತ್ನಿಸುತ್ತಿದೆ.

ಸದ್ಯ ಗಣಿ ಪ್ರಕರಣಗಳು ವಿಚಾರಣೆಯ ವಿವಿಧ ಹಂತಗಳಲ್ಲಿದ್ದು ಕೆಲವು ಪ್ರಕರಣಗಳಲ್ಲಿ ಸರಕಾರ ಬಿ ವರದಿ ಸಲ್ಲಿಸಿದೆ. ಸಾಕ್ಷ್ಯಗಳ ಕೊರತೆಯಿಂದ ಬೇಲೆಕೇರಿ ಗಣಿ ಪ್ರಕರಣದ ತನಿಖೆಯನ್ನು ಸಿಬಿಐ ಕೈಬಿಟ್ಟಿದೆ.

LEAVE A REPLY