ಮೊಯ್ದಿನ್ ಬಾವಾ ವಿರುದ್ಧ ಬಿಜೆಪಿ ದೂರು

ರಾಜಕೀಯ ಪ್ರಚಾರಕ್ಕಾಗಿ ಶಾಲಾ ಮಕ್ಕಳ ದುರುಪಯೋಗ

ಸಂ. ಎ5. ದೂರು/1/2017-18

ದಿನಾಂಕ : 12-06-20-17

ಮಾನ್ಯರೇ,

ವಿಷಯ : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಶಾಲಾ ವಿದ್ಯಾರ್ಥಿಗಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರ ವಿರುದ್ಧ ದೂರು.

* * *

ದ ಕ ಜಿಲ್ಲೆ 202 ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮೊೈದಿನ್ ಬಾವಾ ಇವರು ಶಾಲಾ ಮಕ್ಕಳಿಗೆ ಪುಸ್ತಕ ನೀಡುವ ನೆಪವೊಡ್ಡಿ, ಕೆಲವು ಕೇಂದ್ರಗಳಿಗೆ ಶಾಲಾ ಅಧ್ಯಾಪಕರ ಮೂಲಕ ವಿದ್ಯಾರ್ಥಿಗಳನ್ನು ಕರೆಸಿಕೊಂಡು 3-4 ಗಂಟೆಗಳ ದೀರ್ಘ ಕಾರ್ಯಕ್ರಮಗಳನ್ನು ಆಯೋಜಿಸಿ, ರಾಜಕೀಯ ಪ್ರೇರಿತ ಭಾಷಣಗಳನ್ನು ಮಾಡುತ್ತಾ, ಬಿಜೆಪಿ ಮತ್ತು ಅದರ ನಾಯಕರನ್ನು ದೂಷಿಸುತ್ತಾ, ಕೊನೆಗೆ ತನ್ನ ರಾಜಕೀಯ ಕುಹಕ ಮನಸ್ಥಿತಿಗೆ ಪೂರಕವಾದ ಸಂಜೆ ಪತ್ರಿಕೆಗಳನ್ನು ಮಕ್ಕಳಿಗೆ ವಿತರಿಸಿರುತ್ತಾರೆ. (ಅಡಕ-1)

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಲಾ 5-6 ನೋಟ್ ಪುಸ್ತಕಗಳನ್ನು ವಿತರಿಸಿದ್ದು ಅ ಪುಸ್ತಕದ ರಕ್ಷಾ  ಮುಖಪುಟದಲ್ಲಿ ತನ್ನದೇ ದೊಡ್ಡ ಭಾವಚಿತ್ರವನ್ನು ಒಳರಕ್ಷಾ ಪುಟಗಳಲ್ಲಿ ತಾನು ಪೋಸ್ ಕೊಟ್ಟ ಕಾರ್ಯಕ್ರಮಗಳ ಭಾವಚಿತ್ರಗಳನ್ನು ಮುದ್ರಿಸಿರುತ್ತಾರೆ. (ಅಡಕ-2) ಸದ್ರಿ ಪುಸ್ತಕಗಳಿಗೆ ಮೇಲ್ಮೈ ಹೊರಕವಚವನ್ನು ಹಾಕಬಾರದೆಂದು ವಿನಂತಿಸಿರುತ್ತಾರೆ.

ಈ ಪ್ರಕ್ರಿಯೆಯು ಜನರಿಗೆ ಮಂಕುಬೂದಿ ಎರಚುವ ರಾಜಕೀಯ ದುರುದ್ದೇಶವನ್ನು ಹೊಂದಿವೆ. ಕೆಲವೇ ತಿಂಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ನಡೆಸಿದ ಪ್ರಚಾರ ತಂತ್ರದ ಭಾಗವಾಗಿದ್ದು ಅದಕ್ಕಾಗಿ ಸರಕಾರಿ ಯಂತ್ರವನ್ನು ದುರುಪಯೋಗಪಡಿಸಲಾಗಿದೆ. ಅಂದಾಜು 2018 ಫೆಬ್ರವರಿ ತಿಂಗಳಿನಲ್ಲಿ ಚುನಾವಣಾ ನೀತಿ ಸಂಹಿತೆ ಜ್ಯಾರಿಗೆ ಬಂದರೆ ಅದೇ ಕಾರಣದಿಂದ ಸದ್ರಿ ಪುಸ್ತಕಗಳನ್ನು ಉಪಯೋಗಿಸಲು ಅವಕಾಶವಿರದ ಪರಿಸ್ಥಿತಿಗೆ ತಲುಪಿ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಾರೆ.

ಇದಲ್ಲದೆ ತಾನು ಶಾಸಕನಾಗಿ ಆಯ್ಕೆಗೊಂಡ ನಂತರದ ಪ್ರತೀ ವರ್ಷ ಆಗಸ್ಟ್ 15ರಂದು  ಸ್ವಾತಂತ್ರ್ಯೋತ್ಸವವನ್ನು ಖಾಸಗೀ ಫಿಝಾ ಮೈದಾನ, ಕೃಷ್ಣಾಪುರದಲ್ಲಿ ಈ ವ್ಯಕ್ತಿ ಖಾಸಗಿಯಾಗಿ ಆಚರಿಸುತ್ತಿದ್ದು ಸದ್ರಿ ಕಾರ್ಯಕ್ರಮಕ್ಕೆ ಪರಿಸರದ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಬಲವಂತವಾಗಿ ಮೌಖಿಕ ಆದೇಶದ ಮೂಲಕ ಕಾರ್ಯಕ್ರಮಕ್ಕೆ ಕರೆಸಿ ತೆರೆದ ವಾಹನದಲ್ಲಿ ಧ್ವಜ ವಂದನೆ/ಅತಿಥಿ ವಂದನೆಯನ್ನು ಸ್ವೀಕರಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಾ ಶಾಸಕರ ಒತ್ತಾಯದ ಮೇರೆಗೆ ಭಾಗವಹಿಸುತ್ತಾರೆ.

ಒಟ್ಟಿನಲ್ಲಿ ಶಾಸಕ ಮೊೈದಿನ್ ಬಾವಾರವರು ತನ್ನ ರಾಜಕೀಯ ತೀಟೆಯನ್ನು ತೀರಿಸಿಕೊಳ್ಳಲು ಮತ್ತು ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಮುಗ್ಧ ಮಕ್ಕಳನ್ನು ಹಾಗೂ ಸರಕಾರಿ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಖಂಡನೀಯ. ಇದು ಶಿಷ್ಟಾಚಾರದ ಅವಹೇಳವಾಗಿದೆ ಮತ್ತು ಪ್ರಜಾತಂತ್ರವನ್ನು ಅಣಕಿಸುವುದಾಗಿದೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ತೊಂದರೆಗೊಳಗಾಗುತ್ತಾರೆ. ಈ ರೀತಿಯ ಹಿಟ್ಲರ್‍ಗಳಿಗೆ ಯಾ ಸರ್ವಾಧಿಕಾರಿ ವರ್ತನೆಗೆ ತಡೆ ಬೀಳಬೇಕಾಗಿರುವುದು ತುರ್ತು ಅಗತ್ಯವಾಗಿದೆ.

ಆದುದರಿಂದ ಶಾಲಾ ಮಕ್ಕಳಿಗೆ ನೀಡಿದ ರಾಜಕೀಯ ಪ್ರೇರಿತ ಸಾಹಿತ್ಯ/ವಸ್ತುಗಳನ್ನು ತಕ್ಷಣ ಹಿಂಪಡೆಯಬೇಕೆಂದೂ, ಶಾಲಾ ಮಕ್ಕಳ ಮುಗ್ಧತೆಯನ್ನು ದುರಪಯೋಗಪಡಿಸಿದ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕೆಂದೂ, ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ಮುಗ್ಧ ಮಕ್ಕಳನ್ನು ಮತ್ತು ಅಧ್ಯಾಪಕರನ್ನು ಬಳಸಿಕೊಂಡು ಸ್ವಯಂ ವೈಭವೀಕರಿಸಿಕೊಂಡು ನಡೆಸುವ ಖಾಸಗಿ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡಬಾರದೆಂದೂ ಈ ಮೂಲಕ ಆಗ್ರಹಿಸುತ್ತಿದ್ದೇವೆ.

ಸಹಿ/-

ಡಾ || ಭರತ್ ಶೆಟ್ಟಿ ವೈ

ಅಧ್ಯಕ್ಷರು,

ಅಶೋಕ್

ಪ್ರಧಾನ ಕಾರ್ಯದರ್ಶಿ

ಸುಧಾಕರ್ ಆಚಾರ್ಯ ಅಡ್ಯಾರ್

ಪ್ರಧಾನ ಕಾರ್ಯದರ್ಶಿ

ಹರೀಶ್ ಶೆಟ್ಟಿ

ಖಜಾಂಚಿ


ಶಿಕ್ಷಣ ಇಲಾಖೆ ಸುತ್ತೋಲೆ

ವಿಷಯ : ಸರಕಾರಿ/ಶಿಕ್ಷಕರು ರಾಜಕೀಯ ವಿಷಯಗಳಲ್ಲಿ ಪಕ್ಷಾತೀತವಾಗಿ ನಡೆದುಕೊಳ್ಳುವ ಬಗ್ಗೆ ಸೂಚನೆಗಳು.

* * *

ಕರ್ನಾಟಕ ನಾಗರಿಕ ಸೇವಾ (ನಡತೆ ನಿಯಮ) 1966ರ ನಿಯಮ 5ರ ಪ್ರಕಾರ ಸರಕಾರಿ ನೌಕರರು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ. ಸರಕಾರಿ ನೌಕರರು ಹಾಗೂ ಶಿಕ್ಷಕರು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಪಕ್ಷಾತೀತವಾಗಿ ವರ್ತಿಸಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸತಕ್ಕದ್ದು.

ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸರ್ಕಾರಿ ನೌಕರರು ಹಾಗೂ ಶಿಕ್ಷಕರು ರಾಜಕೀಯ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಬಗ್ಗೆ ದೂರುಗಳು,ಪತ್ರಗಳು ಇಲಾಖೆಗೆ ಸಲ್ಲಿಕೆಯಾಗುತ್ತಿರುವುದನ್ನು ಗಮನಿಸಲಾಗುತ್ತಿದೆ.

ಸರಕಾರಿ ಕಚೇರಿಗಳಲ್ಲಿ ಅಥವಾ ಸರ್ಕಾರಿ ಶಾಲಾ ಆವರಣಗಳಲ್ಲಿ ಯಾವುದೇ ರಾಜಕೀಯ ನಾಯಕರ ಭಾವಚಿತ್ರಗಳಾಗಿರುವ ಪುಸ್ತಕ, ಬ್ಯಾನರ್ ಗೋಡೆಬರಹಗಳನ್ನು, ಭಿತ್ತಿಪತ್ರಗಳನ್ನು ಪ್ರದರ್ಶಿಸುವುದಕ್ಕೆ ಹಾಗೂ ಶಾಲಾ ವಿದ್ಯಾರ್ಥಿಗಳನ್ನು ಇಂತಹ ವಿಷಯಗಳಲ್ಲಿ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡುವಂತಿಲ್ಲ. ಇಂತಹ ಅಶಿಸ್ತಿನ ನಡೆವಳಿಕೆಗಳು ಕಂಡುಬಂದಲ್ಲಿ ಆ ಬಗ್ಗೆ ಸಂಬಂಧಿಸಿದ ನೌಕರರು ಹಾಗೂ ಶಿಕ್ಷಕರ ಮೇಲೆ ಕರ್ನಾಟಕ ನಾಗರಿಕಾ ಸೇವಾ ನಿಯಮ (ಸಿ ಪಿ ಸಿ) ನಿಯಮ  1957ರ ಪ್ರಕಾರ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ.

ಸಹಿ/-

ಉಪ ನಿರ್ದೇಶಕರು (ಆಡಳಿತ)

ಸಾರ್ವಜನಿಕ ಶಿಕ್ಷಣ ಇಲಾಖೆ

ದ ಕ ಮಂಗಳೂರು