`ಬಿಜೆಪಿ ಎರಡು ತಲೆಯ ಹಾವು ‘

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಎತ್ತಿನಹೊಳೆ ಯೋಜನೆ ವಿರೋಧಿಸಿ ಸಂಸದ ನಳಿನ್‍ಕುಮಾರ್ ಕಟೀಲು ಅವರು ಸಂಘಪರಿವಾರವನ್ನು ಕಟ್ಟಿಕೊಂಡು ಸಪ್ತಕ್ಷೇತ್ರ ರಥಯಾತ್ರೆ ಮಾಡುವ ಬದಲು ಇಂದು ಸಾಮಾಜಿಕ, ಸಾಮರಸ್ಯದ ರಥಯಾತ್ರೆ ಮಾಡಲಿ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ.

“ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಏನೂ ಮಾಡಿಲ್ಲ. ಕೇವಲ ಪೋಸ್ಟರ್, ಪ್ರಚಾರದ ಮೂಲಕ ಅವರು ನಂಬರ್ ಒನ್ ಸಂಸದ ಎನ್ನುವ ಬಿರುದು ಪಡೆದುಕೊಂಡಿದ್ದಾರೆ” ಎಂದು ವ್ಯಂಗ್ಯವಾಡಿದರು.

ನೇತ್ರಾವತಿ ರಥಯಾತ್ರೆಯನ್ನು ನಡೆಸುತ್ತಿರುವವರು ಬಿಜೆಪಿ ಹಾಗೂ ಸಂಘಪರಿವಾರದವರಾಗಿದ್ದು, ರಾಜಕೀಯ ದ್ವೇಷವನ್ನು ಇಟ್ಟುಕೊಂಡು ಈ ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

“ನೇತ್ರಾವತಿ ನದಿ ತಿರುವು ಯೋಜನೆಗೆ ಮೂಲ ಕಾರಣಕರ್ತರು ಬಿಜೆಪಿ ನಾಯಕರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲಾವಧಿಯಲ್ಲಿ ಈ ಬಗ್ಗೆ ಬಜೆಟ್ಟಿನಲ್ಲಿ ಇಟ್ಟು ಮಂಜೂರಾತಿ ಕೊಟ್ಟ ಸಂದರ್ಭದಲ್ಲಿ ಅಂದು ಉಡುಪಿಯ ಗೃಹ ಸಚಿವ ವಿ ಎಸ್ ಆಚಾರ್ಯ ಮಾಧ್ಯಮಗಳಿಗೆ ಈ ವಿಚಾರವನ್ನು ತಿಳಿಸಿದ್ದರು. ಆದರೆ ಅಂದು ವಿರೋಧ ವ್ಯಕ್ತಪಡಿಸದ ಬಿಜೆಪಿ, ಬಳಿಕ ಸದಾನಂದ ಗೌಡ, ಶೆಟ್ಟರ್ ಮುಖ್ಯಮಂತ್ರಿ ಆದ ವೇಳೆಯೂ  ಮೌನವಾಗಿದ್ದರು. ಆದರೆ ಇದೀಗ ಕಾಂಗ್ರೆಸ್ ಸರಕಾರ ಬಂದಾಗ ಪ್ರತಿಭಟನೆಗೆ ಮುಂದಾಗಿರುವುದು ರಾಜಕೀಯ ದುರದ್ದೇಶವಲ್ಲದೇ ಬೇರೇನೂ ಅಲ್ಲ. ಇತರರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮುಖಂಡರು ಕೈಬಿಡಲಿ. ಬಿಜೆಪಿ ಎರಡು ನಾಲಿಗೆ ಹಾವು ಇದ್ದಂತೆ;; ಎಂದರು