ದ ಕ ಜಿಲ್ಲೆಯಲ್ಲೂ ಹಕ್ಕಿಜ್ವರ ಭೀತಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಆವರಿಸಿಕೊಂಡಿದೆ. ಪಕ್ಕದ ಕೇರಳ ಮತ್ತು ಮೈಸೂರು ಜಿಲ್ಲೆಗಳಲ್ಲಿ ಈಗಾಗಲೇ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ಜಿಲ್ಲೆಯಲ್ಲೂ ಈ ನಿಟ್ಟಿನಲ್ಲಿ ವ್ಯಾಪಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಿಲ್ಲೆಯಾದ್ಯಂತ ಕೋಳಿ ಫಾರ್ಮುಗಳಿಂದ ನಿಯಮಿತವಾಗಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೆರೆ, ಹಳ್ಳ, ಅರಣ್ಯ ಪ್ರದೇಶಗಳಿಗೆ ವಲಸೆ ಬರುವ ಹಕ್ಕಿಗಳ ಮೇಲೆ ನಿಗಾ ವಹಿಸುವಂತೆ ಅರಣ್ಯ ಇಲಾಖೆಯು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ ಟಿ ತಿಪ್ಪೇಸ್ವಾಮಿ ಹೇಳಿದ್ದಾರೆ.

ಈಗಾಗಲೇ ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳು ಹಾಗೂ ಜಿಲ್ಲೆಯ ಕೋಳಿ ಸಾಕಾಣಿಕೆದಾರರ ಸಭೆ ಕರೆದು ಹಕ್ಕಿಜ್ವರದ ಭೀತಿ ಬಗ್ಗೆ ಚರ್ಚಿಸಲಾಗಿದೆ. ಕೇರಳದಲ್ಲಿ ಹಕ್ವಿಜ್ವರ ಕಾಣಿಸಿಕೊಂಡಿರುವುದರಿಂದ ಕೋಳಿ ಫಾರ್ಮುಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎನ್ನುತ್ತಾರವರು.

ಜಿಲ್ಲೆಯಲ್ಲಿ ಸುಮಾರು 1500 ಮಂದಿ ಕೋಳಿಸಾಕಾಣಿಕೆದಾರರು ಇದ್ದಾರೆ. ಇವರೆಲ್ಲರಿಗೂ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹಕ್ಕಿಗಳು ಅಸಹಜವಾಗಿ ಸಾವನ್ನಪ್ಪುತ್ತಿರುವುದು ಕಂಡು ಬಂದರೆ ಕೂಡಲೇ ಇಲಾಖೆ ಗಮನಕ್ಕೆ ತರುವಂತೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವಂತೆ ಎಲ್ಲಾ ಇಲಾಖೆಗಳಿಗೂ ತಿಳಿಸಲಾಗಿದೆ. ನಾವು ಅಗತ್ಯ ಔಷಧಿ, ಇತರ ಸಲಕರಣೆಗಳೊಂದಿಗೆ ಸನ್ನದ್ಧರಾಗಿದ್ದೇವೆ ಎಂದವರು ಹೇಳಿದ್ದಾರೆ.

ವಿಶೇಷವಾಗಿ ಪಿಲಿಕುಳ ನಿಸರ್ಗಧಾಮದಲ್ಲಿ ಹಕ್ಕಿಜ್ವರದ ಕುರಿತು ಎಚ್ಚರಿಕೆ ವಹಿಸಲಾಗಿದೆ. ಇಲ್ಲಿ 200ಕ್ಕೂ ಅಧಿಕ ಜಾತಿಯ ಹಕ್ಕಿಗಳಿವೆ. ಸುಮಾರು 100 ಎಕರೆ ವಿಸ್ತಾರದ ಕೆರೆ ಇದ್ದು, ವಲಸೆ ಹಕ್ಕಿಗಳೂ ಇಲ್ಲಿಗೆ ಬರುತ್ತವೆ.