ತೈಲ ತ್ಯಾಜ್ಯ ರಸ್ತೆಗೆ : ಬೈಕ್ ಸ್ಕಿಡ್ಡಾಗಿ ಬಿದ್ದ ಸವಾರರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೃದಯಭಾಗದ ರಸ್ತೆಯಲ್ಲಿ ಡ್ರೈನೇಜ್ ಮೂಲಕ ತೈಲಮಿಶ್ರಿತ ತ್ಯಾಜ್ಯ ಲೀಕ್ ಉಂಟಾಗಿ ರಸ್ತೆಯುದ್ದಕ್ಕೂ ಹರಿದ ಪರಿಣಾಮ ಇದನ್ನು ಅರಿಯದ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಘಟನೆ ನಡೆಯಿತು.

ನಗರದ ಜ್ಯೋತಿ ಸರ್ಕಲ್ (ಅಂಬೇಡ್ಕರ್ ವೃತ್ತ) ಸಮೀಪದಲ್ಲಿ ಈ ಘಟನೆ ನಡೆದಿದೆ.ಹೋಟೆಲುಗಳ ವೇಸ್ಟ್ ಆಯಿಲ್ ಡ್ರೈನೇಜ್ ಮೂಲಕ ಹೊರಕ್ಕೆ ಬಂದಿರಬೇಕೆಂದು ಶಂಕಿಸಲಾಗಿದೆ. ಆದರೆ ಈ ಆಯಿಲ್ ಲೀಕೇಜಿನಿಂದಾಗಿ ಇದನ್ನು ಅರಿಯದ ಬೈಕ್ ಸವಾರರು ಇದರ ಮೇಲ್ಭಾಗದಲ್ಲೇ ಚಲಿಸಿ ಸುಮಾರು 10ಕ್ಕೂ ಹೆಚ್ಚು ಸವಾರರು ಗಾಯಗೊಂಡರು.

ಈ ಸಂದರ್ಭ ವಾಹನ ಚಾಲಕರು ಇಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶಗೊಂಡರು. ಇಲ್ಲಿ ತ್ಯಾಜ್ಯ ಹರಿಯುತ್ತಿರುವ ಬಗ್ಗೆ ಪಾಲಿಕೆಗೆ, ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದರೂ ಏನೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಪತ್ರಕರ್ತರ ಗಮನಕ್ಕೆ ಈ ವಿಚಾರ ಬಂದಿದ್ದು, ಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮಂಗಳೂರು ನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಒಳಚರಂಡಿಯನ್ನು ದುರಸ್ತಿ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಗಾಯಗೊಂಡ ಕೆಲವರು ಸಂಚಾರಕ್ಕೆ ಅಡ್ಡಿ ಪಡಿಸಿ, ಘಟನೆ ಬಗ್ಗೆ ತಿಳಿಸಿದರೂ ಪಾಲಿಕೆ ಅಧಿಕಾರಿಗಳು ಆಗಮಿಸಲು ವಿಳಂಬ ನೀತಿ ಅನುಸರಿಸಿರುವುದಕ್ಕೆ ಗಾಯಾಳು ಋಷಿಕೇಶ್ ಎಂಬವರು ಮೇಯರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮೇಯರ್ ಉದ್ರಿಕ್ತರನ್ನು ಸಮಾಧಾನ ಪಡಿಸಿ, ಇದರ ದುರಸ್ತಿ ಕಾರ್ಯವನ್ನು ಮಾಡುವುದಾಗಿ ಭರವಸೆ ನೀಡಿದರು.

ಹೋಟೆಲುಗಳಲ್ಲಿ ಉಪಯೋಗಿಸುವ ಎಣ್ಣೆಯ ಅಂಶವನ್ನು ಚರಂಡಿಗೆ ಬಿಡುವುದರಿಂದ ಅದು ನೀರಿನಲ್ಲಿ ಸೇರಿ ಈ ರೀತಿ ಆಗಿರುವ ಸಾಧ್ಯತೆ ಇದೆ ಎಂದ ಮೇಯರ್ ಈಗಾಗಲೇ ಹೋಟೆಲ್ ಮಾಲಕರಿಗೆ ಈ ಕುರಿತು ಎಚ್ಚರಿಕೆ ನೊಟೀಸ್ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.