ಟಿಪ್ಪರ್ ಗುದ್ದಿ ಬೈಕ್ ಸವಾರ ಛಿದ್ರ

ಮೃತ ಸುದರ್ಶನ್ ಶೆಣೈ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರಬೆಟ್ಟು-ಪೂರ್ಲಿಪ್ಪಾಡಿ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಮೃತನನ್ನು ಮೂಲತಃ ಬೋಳಂಗಡಿ ನಿವಾಸಿ ದೇವದಾಸ ಶೆಣೈ ಎಂಬವರ ಪುತ್ರ ಸುದರ್ಶನ ಶೆಣೈ (28) ಎಂದು ಹೆಸರಿಸಲಾಗಿದೆ. ಮಂಗಳೂರಿನ ಸಿಟಿ ಸೆಂಟರ್ ಐಡಿಯಲ್ ಐಸ್ ಕ್ರೀಂ ಪಾರ್ಲರಿನಲ್ಲಿ ಉದ್ಯೋಗಿಯಾಗಿರುವ ಸುದರ್ಶನ್ ಶೆಣೈ ಗುರುವಾರ ಬೆಳಿಗ್ಗೆ ಪುತ್ತೂರಿನಿಂದ ತನ್ನ ಬೈಕಿನಲ್ಲಿ ಮಂಗಳೂರಿಗೆ ಬರುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಎದುರಿನಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಡ ಸಂಭವಿಸಿದೆ. ಅಫಘಾತದ ಭೀಕರತೆಗೆ ಸುದರ್ಶನ್ ಶೆಣೈ ದೇಹ ಛಿದ್ರಗೊಂಡಿದ್ದು, ನೋಡಲಾಗದ ಸ್ಥಿತಿಯಲ್ಲಿತ್ತು. ಘಟನಾ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಬಂಟ್ವಾಳ ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಅವರು ಮೃತದೇಹದ ಜೇಬಿನಲ್ಲಿ ದೊರೆತ ಗುರುತು ಚೀಟಿ ಆಧಾರದಲ್ಲಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.

ಮೂಲತಃ ಬೋಳಂಗಡಿ ನಿವಾಸಿಯಾಗಿದ್ದ ದೇವದಾಸ ಶೆಣೈ ಅವರು ಇತ್ತೀಚೆಗೆ ಕುಟುಂಬ ಸಮೇತ ಪುತ್ತೂರಿಗೆ ವಾಸ್ತವ್ಯ ಬದಲಾಯಿಸಿದ್ದರು. ಇದರಿಂದ ಸುದರ್ಶನ್ ಶೆಣೈ ಅವರು ಪುತ್ತೂರು ಮನೆಯಿಂದ ಮಂಗಳೂರು ಕಡೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಸುದರ್ಶನ್ ಶೆಣೈ ಅವರ ಬೈಕನ್ನು ತಪ್ಪಿಸಲು ಟಿಪ್ಪರ್ ಚಾಲಕ ಶಕ್ತಿ ಮೀರಿ ಶ್ರಮಿಸಿದ್ದು, ಪರಿಣಾಮ ಟಿಪ್ಪರ್ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಗಿಳಿದು ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಟಿಪ್ಪರ್ ಚಾಲಕ ಕೂಡಾ ಟಿಪ್ಪರಿನೊಳಗೆ ಬಾಕಿಯಾಗಿದ್ದು, ಬಳಿಕ ಸ್ಥಳೀಯರು ಸೇರಿಕೊಂಡು ಅವರನ್ನು ಹೊರಕ್ಕೆಳೆದಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.