ಕಾರು ಡಿಕ್ಕಿ : ಬೈಕ್ ಸವಾರ ಮೃತ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಗುಣವಂತೆಯ ಅಭಿತೋಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲೂಕಿನ ಮಂಕಿ ಹಳೇಮಠದ ನಿವಾಸಿ ನಾಗೇಶ ಕೊರಗ ಖಾರ್ವಿ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಈತ ಮಂಕಿ ಹಳೇಮಠದಿಂದ ಕಾಸರಕೋಡ ಟೊಂಕಾದ ಮೀನುಗಾರಿಕಾ ಬಂದರಿಗೆ ಮೀನು ವ್ಯಾಪಾರಕ್ಕೆಂದು ಬರುತ್ತಿದ್ದಾಗ ಹೊನ್ನಾವರದಿಂದ ಭಟ್ಕಳ ಮಾರ್ಗವಾಗಿ ಅತಿವೇಗ ಹಾಗೂ ನಿಷ್ಕಾಳಜಿಯಿಂದ ಕಾರು ಚಲಾಯಿಸಿಕೊಂಡು ಬಂದ ಚಾಲಕ ಬೈಕಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ.

ಅಪಘಾತಪಡಿಸಿದ ಕಾರು ಚಾಲಕ ಸ್ಥಳದಲ್ಲಿ ತನ್ನ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದ. ಭಟ್ಕಳ ಠಾಣೆಗೆ ಮಂಕಿ ಠಾಣೆಯ ಪೊಲೀಸರು ಮಾಹಿತಿ ನೀಡಿದಾಗ ಅಪಘಾತಪಡಿಸಿದ ಚಾಲಕ ಮುನಿರ್ ಜೈರಾಮ್ ಸ್ವಾರ್ ಎಂಬಾತನನನ್ನು ಅಲ್ಲಿ ಬಂಧಿಸಿ, ಕಾರನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.